ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಸಿದ್ಧ ಪ್ರವಾಸಿ ಸ್ಥಳಗಳಲ್ಲಿ ಒಂದಾದ ಶ್ರೀ ಚಾಮರಾಜೇಂದ್ರ ಮೃಗಾಲಯದ ಮುಂಭಾಗ ನ್ಯೂ ಮೈಸೂರು ರಿಫ್ರೆಶ್ ಮೆಂಟ್ ಹೋಟೆಲ್ ಮುಂಭಾಗ ಗ್ರಾಹಕರು ವಾಹನ ನಿಲುಗಡೆ ಮಾಡುತ್ತಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಆದರೆ ಸಿದ್ದಾರ್ಥ ಸಂಚಾರಿ ಠಾಣಾ ಪೊಲೀಸರು ಈ ಸಮಸ್ಯೆಯನ್ನು ಕಂಡೂ ಕಾಣದಂತೆ ಜಾಣ ಕುರುಡು ಪ್ರದರ್ಶಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮೃಗಾಲಯ ವೀಕ್ಷಿಸಲು ಲಕ್ಷಾಂತರ ಮಂದಿ ಭೇಟಿ ನೀಡುತ್ತಾರೆ. ಹೀಗಿರುವಾಗ ಸಂಚಾರ ವ್ಯವಸ್ಥೆಗೆ ತೊಂದರೆಯಾಗುವಂತೆ ಹೋಟೆಲ್ ಗ್ರಾಹಕರ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಟ್ಟಿರುವುದು ಸಾಕಷ್ಟು ಅನುಮಾನಕ್ಕೀಡು ಮಾಡಿದೆ.
ಮಾತ್ರವಲ್ಲದೇ ರಸ್ತೆಯಲ್ಲಿ ನಿಲುಗಡೆ ಮಾಡಿರುವ ವಾಹನಗಳಿಗೆ ನಿಯಮಬಾಹಿರವಾಗಿ ಆಹಾರ ಸರಬರಾಜು ಮಾಡುತ್ತಿರುವ ಹೋಟೆಲ್ ಮಾಲೀಕರ ವಿರುದ್ಧ ಪೊಲೀಸರಾಗಲೀ, ಆಹಾರ ಇಲಾಖೆಯಾಗಲೀ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ.
ಈ ಕುರಿತು ಆರ್ ಟಿ ಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಮೇತ ಪೋಸ್ಟ್ ಮಾಡಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.