ಮೈಸೂರು: ಕರ್ನಾಟಕ ವಿಧಾನ ಪರಿಷತ್ತಿನ ದಕ್ಷಿಣ ಪದವೀಧರರ ಕ್ಷೇತ್ರದಿಂದ ಆಯ್ಕೆ ಮಾಡುವ ಬಗ್ಗೆ ಭಾರತ ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿಯನ್ನು ಹೊರಡಿಸಿದ್ದು, ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗೆ ಎಲ್ಲರೂ ಸಹಕರಿಸಿ ಎಂದು ಎಂದು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಕರ್ನಾಟಕ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣಾಧಿಕಾರಿಯವರಾದ ಡಾ. ಜಿ.ಸಿ. ಪ್ರಕಾಶ್ ತಿಳಿಸಿದರು.
ಪ್ರಾದೇಶಿಕ ಆಯುಕ್ತರ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮೇ 19 ರಂದು ಅಧಿಸೂಚನೆ ಹೊರಡಿಸಲಾಗುತ್ತದೆ. ನಾಮಪತ್ರ ಸಲ್ಲಿಸಲು ಮೇ 26 ಕೊನೆಯ ದಿನವಾಗಿದೆ. ನಾಮಪತ್ರಗಳ ಪರಿಶೀಲನೆಯನ್ನು ಮೇ 27 ರಂದು ನಡೆಸಲಾಗುತ್ತದೆ. ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಮೇ 30 ಕಡೆಯ ದಿನವಾಗಿದೆ. ಮತದಾನ (ಅವಶ್ಯವಿದ್ದಲ್ಲಿ) ದಿನಾಂಕವು ಜೂನ್ 13 ಆಗಿರುತ್ತದೆ. ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಮತದಾನದ ವೇಳೆ ನಿಗದಿಯಾಗಿದೆ. ಜೂನ್ 15 ರಂದು ಮತಗಳ ಎಣಿಕೆ ಕಾರ್ಯವು ನಡೆಯಲಿದೆ. ಚುನಾವಣಾ ಪ್ರಕ್ರಿಯೆ ಜೂನ್ 17 ರಂದು ಮುಕ್ತಾಯವಾಗಲಿದೆ ಎಂದರು.
ಮೈಸೂರು ವಿಭಾಗಕ್ಕೆ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಚುನಾವಣಾ ಅಧಿಕಾರಿಯಾಗಿದ್ದು, ಕರ್ನಾಟಕ ದಕ್ಷಿಣ ಪದವೀಧರರ ಕ್ಷೇತ್ರ ವ್ಯಾಪ್ತಿಗೆ ಚಾಮರಾಜನಗರ, ಮೈಸೂರು, ಮಂಡ್ಯ ಮತ್ತು ಹಾಸನ ಜಿಲ್ಲೆಗಳು ಒಳಪಡಲಿವೆ. ಈ ಜಿಲ್ಲೆಗಳ ಆಯಾ ಜಿಲ್ಲಾಧಿಕಾರಿಗಳು ಸಹಾಯಕ ಚುಣಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಾರೆ. ಮಾದರಿ ನೀತಿ ಸಂಹಿತೆ ಜೂನ್ 17 ರವರೆಗೆ ಜಾರಿಯಲ್ಲಿರುತ್ತದೆ. ನೀತಿ ಸಂಹಿತೆ ಉಲ್ಲಂಘಿಸುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮಾದರಿ ನೀತಿ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಪಾಲಿಸಲು ತಂಡಗಳನ್ನು ತೆರೆದು ಅಧಿಕಾರಿಗಳನ್ನು ನಿಯೋಜಿಸಲಾಗುವುದು ಎಂದು ತಿಳಿಸಿದರು.
ಹಾಸನ ಜಿಲ್ಲೆಯಲ್ಲಿ 13269 ಪುರುಷ, 9817 ಮಹಿಳಾ ಹಾಗೂ ಇತರೆ 2 ಮತದಾರರು ಸೇರಿ ಒಟ್ಟು 23038 ಮತದಾರರಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ 24824 ಪುರುಷ, 19534 ಮಹಿಳಾ ಹಾಗೂ ಇತರೆ 12 ಮತದಾರರು ಸೇರಿ ಒಟ್ಟು 44370 ಮತದಾರರಿದ್ದಾರೆ. ಮೈಸೂರು ಜಿಲ್ಲೆಯಲ್ಲಿ 31687 ಪುರುಷ, 22347 ಮಹಿಳಾ ಹಾಗೂ ಇತರೆ 5 ಮತದಾರರು ಸೇರಿ ಒಟ್ಟು 54039 ಮತದಾರರಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ 7561 ಪುರುಷ, 4063 ಮಹಿಳಾ ಹಾಗೂ ಇತರೆ 2 ಮತದಾರರು ಸೇರಿ ಒಟ್ಟು 11626 ಮತದಾರರಿದ್ದಾರೆ. ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ ಒಟ್ಟು 77291 ಪುರುಷ, 55761 ಮಹಿಳಾ ಹಾಗೂ ಇತರೆ 21 ಮತದಾರರು ಸೇರಿ 133073 ಮತದಾರರು ಇದ್ದಾರೆ.
ಅಲ್ಲದೆ ಮೇ 16 ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. 10 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು ನಿಯಮಾನುಸಾರ ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗುವುದು. ಒಟ್ಟು 130 ಮತಗಟ್ಟೆ ಕೇಂದ್ರಗಳನ್ನು ತೆರೆಯಲಾಗುತ್ತದೆ ಎಂದು ತಿಳಿಸಿದರು.
ಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿಗಳ ವಯಸ್ಸು 30 ಕ್ಕೂ ಕಡಿಮೆ ಇರಬಾರದು. ಅವರು ಕರ್ನಾಟಕದ ಯಾವುದಾದರೂ ಒಂದು ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಾಗಿರಬೇಕು. ಯಾವುದೇ ಕಾನೂನಿನ ಅಡಿಯಲ್ಲಿ ಅನರ್ಹರಾಗಿರಬಾರದು. ನಾಮಪತ್ರದೊಂದಿಗೆ ಮತದಾರರಾಗಿರುವ ಬಗ್ಗೆ ಸಂಬಂಧಿಸಿದ ಮತದಾರ ನೊಂದಣಾಧಿಕಾರಿ/ಸಹಾಯಕ ನೊಂದಣಾಧಿಕಾರಿಗಳಿAದ ಮತದಾರರ ಪಟ್ಟಿಯ ದೃಢೀಕೃತ ನಕಲನ್ನು ಲಗತ್ತಿಸಬೇಕು. ಸದರಿ ದ್ವೈವಾರ್ಷಿಕ ಚುನಾವಣೆಗೆ ಸಂಬAಧಪಟ್ಟ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ನೊಂದಾಯಿತರಾಗಿರುವವರು ಮಾತ್ರ ಮತದಾರರಾಗಿರುತ್ತಾರೆ ಎಂದರು.
ಚುನಾವಣೆಗೆ ಸ್ಪರ್ಧಿಸಲು ಇಚ್ಚಿಸುವ ಅಭ್ಯರ್ಥಿಗಳು ಮೇ 19 ರಿಂದ 26 ರವರೆಗೆ (ಎರಡು ದಿನಗಳು ಸೇರಿದಂತೆ) ಮೈಸೂರಿನ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಸಲ್ಲಿಸಬಹುದು. ಮೇ 22ರಂದು ಭಾನುವಾರ ನೆಗೋಷಿಯಬಲ್ ಇನ್ಸ್ಟುಮೆಂಟ್ ಆಕ್ಟ್ ಮೇರೆಗೆ ಸಾರ್ವತ್ರಿಕ ರಜಾ ದಿನವಾಗಿರುವುದರಿಂದ ಅಂದು ನಾಮಪತ್ರ ಸ್ವೀಕರಿಸಲಾಗುವುದಿಲ್ಲ. ನಾಮಪತ್ರ ಸಲ್ಲಿಸಲು ಬೇಕಾದ ನಮೂನೆಗಳನ್ನು ಮೈಸೂರಿನ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಪಡೆಯಬಹುದು ಎಂದು ತಿಳಿಸಿದರು.
ಚುನಾವಣೆಗೆ ಸ್ಪರ್ಧಿಸಲಿಚ್ಚಿಸುವವರು ಗಮನಿಸಬೇಕಾದ ಒಂದು ಮುಖ್ಯ ಅಂಶವೆAದರೆ 1951ರ ಪ್ರಜಾ ಪ್ರಾತಿನಿಧ್ಯ ಅಧಿನಿಯಮದ 33ನೇ ನಿಯಮದ ಪ್ರಕಾರ ಪ್ರತಿ ಅಭ್ಯರ್ಥಿ ನಾಮನಿರ್ದೇಶನ ಪತ್ರದಲ್ಲಿ ಕನಿಷ್ಠ ಹತ್ತು ಮತದಾರರು ಸೂಚಕರಾಗಿ ಸಹಿ ಮಾಡಿರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದವರು 5 ಸಾವಿರ ರೂ., ಇತರೆ ಅಭ್ಯರ್ಥಿ 10 ಸಾವಿರ ರೂ. ಠೇವಣಿ ಮಾಡಬೇಕು. ಅಭ್ಯರ್ಥಿಯು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಲ್ಲಿ ಸಕ್ಷಮ ಪ್ರಾಧಿಕಾರದಿಂದ ಪಡೆದ ಜಾತಿ ದೃಢೀಕರಣ ಪತ್ರ ಲಗತ್ತಿಸಬೇಕು ಎಂದರು.
ಅಭ್ಯರ್ಥಿಗಳು ನಿಗದಿತ ನಮೂನೆ (ಫಾರಂ 26 ಮತ್ತು ಅನುಬಂಧ-1ರಲ್ಲಿ) ಗಳಲ್ಲಿ ಪ್ರಮಾಣಪತ್ರವನ್ನು ನೋಟರಿಯವರಿಂದ ಪ್ರಮಾಣೀಕರಿಸಿದ ಪ್ರಮಾಣಪತ್ರವನ್ನು ನಾಮಪತ್ರದೊಂದಿಗೆ ಲಗತ್ತಿಸಿ ಸಲ್ಲಿಸಬೇಕು ಅವರು ತಿಳಿಸಿದರು.