ಮನೆ ರಾಜ್ಯ ಚುನಾವಣೆಯಲ್ಲಿ ಅಕ್ರಮ ಆರೋಪ; ಯತ್ನಾಳ್ ವಿರುದ್ಧದ ಅರ್ಜಿ ವಜಾ – ಸುಪ್ರೀಂ ಕೋರ್ಟ್‌

ಚುನಾವಣೆಯಲ್ಲಿ ಅಕ್ರಮ ಆರೋಪ; ಯತ್ನಾಳ್ ವಿರುದ್ಧದ ಅರ್ಜಿ ವಜಾ – ಸುಪ್ರೀಂ ಕೋರ್ಟ್‌

0

ವಿಜಯಪುರ : ವಿಧಾನಸಭೆ ಚುನಾವಣೆಯಲ್ಲಿ ಅಕ್ರಮವೆಸಗಿದ್ದಾರೆ ಎಂದು ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ಆರೋಪಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ವಿಜಯಪುರ ಕ್ಷೇತ್ರದ ವಿಧಾನಸಭೆ ಚುನಾವಣೆಯಲ್ಲಿ ಅಕ್ರಮ ಎಸಗಿರೋದಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕಾಂಗ್ರೆಸ್ ಶಾಸಕ ಅಬ್ದುಲ್ ಹಮೀದ್ ಮುಶ್ರೀಫ್ ಆರೋಪಿಸಿದ್ದರು. ಈ ಅರ್ಜಿಯನ್ನು ಕಲಬುರಗಿ ಉಚ್ಚ ನ್ಯಾಯಾಲಯ ವಜಾಗೊಳಿಸಿತ್ತು. ಅದಾದ ಬಳಿಕ ಹಮೀದ್ ಮುಶ್ರೀಫ್ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಸುಪ್ರೀಂ ಕೋರ್ಟ್ ಕೂಡ ಅರ್ಜಿ ವಜಾಗೊಳಿಸಿ, ಅರ್ಜಿದಾರರಿಗೆ ದಂಡ ವಿಧಿಸಿದೆ.

ಈ ಕುರಿತು ಶಾಸಕ ಯತ್ನಾಳ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಚುನಾವಣೆಯಲ್ಲಿ ಅಕ್ರಮವೆಸಗಿದ್ದಾರೆ ಎಂದು ನನ್ನ ಮೇಲೆ ಸುಳ್ಳು ಆರೋಪ ಮಾಡಿ Election Petition ದಾಖಲು ಮಾಡಿದ್ದ ಅಬ್ದುಲ್ ಹಮೀದ್ ಖಾಜಾ ಎಂಬುವವರ ಅರ್ಜಿಯನ್ನು ಕಲಬುರಗಿ ಉಚ್ಚ ನ್ಯಾಯಾಲಯವು 2026ರ ಜು.18ರಂದು ವಜಾಗೊಳಿಸಿ, ಅರ್ಜಿದಾರರಿಗೆ ದಂಡ ವಿಧಿಸಿತ್ತು. ಉಚ್ಚ ನ್ಯಾಯಾಲಯದ ತೀರ್ಪನ್ನು ಖಾಜಾ ಸರ್ವೋಚ್ಛ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ದರು.ಸರ್ವೋಚ್ಛ ನ್ಯಾಯಾಲಯವು ಇವರ ಅರ್ಜಿಯನ್ನು ವಜಾ ಮಾಡಿ, ದಂಡವನ್ನು ವಿಧಿಸಿತ್ತು. ಈ ಸರ್ವೋಚ್ಚ ನ್ಯಾಯಾಲಯದ ಆದೇಶದ ವಿಮರ್ಶೆ ಮಾಡಲು ಮತ್ತೊಮ್ಮೆ ಅರ್ಜಿ ಸಲ್ಲಿಸಿ, ರಾಜಕೀಯವಾಗಿ ಲಾಭ ಪಡೆಯಬೇಕೆಂದು ಮಾಡಿದ್ದ ಷಡ್ಯಂತ್ರಕ್ಕೆ ಮುಖಭಂಗ ಆಗಿದೆ.

ಈ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿದೆ. ಈ ರೀತಿಯಾದ ಗೊಡ್ಡು ಬೆದರಿಕೆಗಳಿಗೆ ನಾನು ಹೆದರುವವನಲ್ಲ ಹಾಗೂ ನನ್ನ ಮೇಲೆ ರಾಜಕೀಯ ಪ್ರೇರಿತ, ಆಧಾರರಹಿತ ಆರೋಪಗಳನ್ನು ಮಾಡುವವರ ವಿರುದ್ಧ ಕಾನೂನು ರೀತ್ಯ ಕ್ರಮ ಕೈಗೊಂಡು ಅದನ್ನು ತಾರ್ಕಿಕ ಅಂತ್ಯದವರೆಗೂ ಕೊಂಡೊಯುತ್ತೇನೆ. ಸತ್ಯವನ್ನು ಮರೆಮಾಚಲು ಯಾರಿಂದಲೂ ಸಾಧ್ಯವಿಲ್ಲ ಎಂದರು. ವಿಜಯಪುರದ ಜನತೆ ನನ್ನೊಂದಿಗೆ ಸದಾ ಇರುತ್ತಾರೆ ಹಾಗೂ ಅವರ ಆಶೀರ್ವಾದ ನನ್ನ ಮೇಲೆ ಸದಾ ಇರುತ್ತದೆ ಎಂಬ ಅಚಲ ವಿಶ್ವಾಸ ನನ್ನಲ್ಲಿದೆ. ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡುವ ಈ ರಾಜಕೀಯ ನಿರುದ್ಯೋಗಿಗಳಿಗೆ ನ್ಯಾಯಾಲಯ ದಂಡ ವಿಧಿಸುವ ಮೂಲಕ ಕ್ರಮ ಜರುಗಿಸಿದೆ ಎಂದು ಬರೆದುಕೊಂಡಿದ್ದಾರೆ.