ದೆಹಲಿ : ಮೊಘಲ್ ಚಕ್ರವರ್ತಿ ಎರಡನೇ ಬಹದ್ದೂರ್ ಷಾ ಜಾಫರ್ ಅವರ ಕುಟುಂಬದ ಸದಸ್ಯೆ ಎಂದು ತನ್ನನ್ನು ಪರಿಚಯಿಸಿಕೊಂಡಿದ್ದ ಸುಲ್ತಾನಾ ಬೇಗಂ ಅವರು ಕೆಂಪು ಕೋಟೆ ತನಿಗೆ ಕಾನೂನುಬದ್ಧವಾಗಿ ಸೇರಬೇಕೆಂದು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ. ಈ ಮೂಲಕ ಐತಿಹಾಸಿಕವಾಗಿ ಹಾಗೂ ರಾಜಕೀಯವಾಗಿ ಮಹತ್ವದ ಈ ಕೋಟೆ ಸ್ವಾಧೀನದ ಬಗ್ಗೆಯಾದ ಅವರ ಕನಸು ಧೂಳಿಪಟವಾಗಿದೆ.
ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಹಾಗೂ ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರನ್ನೊಳಗೊಂಡ ಪೀಠ, ಅರ್ಜಿ “ತಪ್ಪಾಗಿ ಗ್ರಹಿಸಲಾಗಿದ್ದು, ಅರ್ಹತೆ ರಹಿತ”ವೆಂದು ಪರಿಗಣಿಸಿದೆ. ಇದೇ ಕಾರಣದಿಂದಾಗಿ ಅರ್ಜಿಯನ್ನು ಪರಿಗಣನೆಗೆ ಸ್ವೀಕರಿಸುವುದನ್ನು ನ್ಯಾಯಪೀಠ ನಿರಾಕರಿಸಿದೆ.
ಸುಲ್ತಾನಾ ಬೇಗಂ ಅವರು ಮೊಘಲ್ ಚಕ್ರವರ್ತಿ ಬಹದ್ದೂರ್ ಷಾ ಜಾಫರ್ ಅವರ ಮೊಮ್ಮಗನ ಪತ್ನಿಯಾಗಿದ್ದು, ದೇಶದ ಸ್ವಾತಂತ್ರ್ಯ ಹೋರಾಟಗಾರರ ವಾರಸುದಾರರೆಂದು ತಮ್ಮನ್ನು ಪರಿಚಯಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ದೆಹಲಿಯ ಕೆಂಪು ಕೋಟೆಯನ್ನು ತಮ್ಮ ಸ್ವತ್ತು ಎಂದು ಪರಿಗಣಿಸಿ ಕಾನೂನುಬದ್ಧವಾಗಿ ಸ್ವಾಧೀನಪಡಿಸಿಕೊಳ್ಳಲು ಅರ್ಜಿ ಸಲ್ಲಿಸಿದ್ದರು.
ವಕೀಲರು ತಮ್ಮ ವಾದದಲ್ಲಿ ಬೇಗಂ ಅವರು ದೇಶದ ಮೊದಲ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರು ಎಂದು ಜೋರಾಗಿ ಹೇಳಿದರೂ, ನ್ಯಾಯಪೀಠವು ಈ ವಾದವನ್ನು ತಳ್ಳಿಹಾಕಿತು. ಮುಖ್ಯ ನ್ಯಾಯಮೂರ್ತಿ ಖನ್ನಾ ಅವರು, “ಕೆಂಪು ಕೋಟೆ ಮಾತ್ರ ಏಕೆ? ಆಗ್ರಾ, ಫತೇಹ್ಪುರ್ ಸಿಕ್ರಿ ಇತ್ಯಾದಿಗಳನ್ನು ಏಕೆ ಕೇಳಬಾರದು?” ಎಂಬ ಪ್ರಶ್ನೆ ಕೇಳಿ ತಿರುಗೇಟು ನೀಡಿದರು.
ಈ ಅರ್ಜಿ ಹಿಂದೆಯೂ ದೆಹಲಿ ಹೈಕೋರ್ಟ್ನಲ್ಲಿ ವಜಾಗೊಂಡಿತ್ತು. 2021ರಲ್ಲಿ ಹೈಕೋರ್ಟ್ ಏಕ ನ್ಯಾಯಾಧೀಶರು ತಿರಸ್ಕರಿಸಿದ ತೀರ್ಪನ್ನು ಬೇಗಂ ಅವರು ಮೇಲ್ಮನವಿ ಮೂಲಕ ಪ್ರಶ್ನಿಸಿದ್ದರು. ಆದರೆ, 2023 ಡಿಸೆಂಬರ್ನಲ್ಲಿ ವಿಭಾಗೀಯ ಪೀಠವೂ ಈ ಮೇಲ್ಮನವಿಯನ್ನು ವಜಾಗೊಳಿಸಿತ್ತು. ಅನಾರೋಗ್ಯ ಹಾಗೂ ಮಗಳ ನಿಧನದ ಕಾರಣದಿಂದ ಮೇಲ್ಮನವಿ ಸಲ್ಲಿಸಲು ವಿಳಂಬವಾಗಿದೆ ಎಂಬ ವಾದವನ್ನೂ ನ್ಯಾಯಾಲಯ ನಿರಾಕರಿಸಿದೆ.














