ಮನೆ ಕಾನೂನು ರಾಜೀವ್ ಗಾಂಧಿ ಹತ್ಯೆ ಆರೋಪಿ ಪೆರಾರಿವಾಲನ್‌ಗೆ ಸುಪ್ರೀಂ ಕೋರ್ಟ್ ಜಾಮೀನು

ರಾಜೀವ್ ಗಾಂಧಿ ಹತ್ಯೆ ಆರೋಪಿ ಪೆರಾರಿವಾಲನ್‌ಗೆ ಸುಪ್ರೀಂ ಕೋರ್ಟ್ ಜಾಮೀನು

0

ಮಹತ್ವದ ಬೆಳವಣಿಗೆಯೊಂದರಲ್ಲಿ, ಸುಪ್ರೀಂ ಕೋರ್ಟ್ ಬುಧವಾರ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಅಪರಾಧಿಯಾದ ಎ ಜಿ ಪೆರಾರಿವಾಲನ್‌ಗೆ ಜಾಮೀನು ಮಂಜೂರು ಮಾಡಿದೆ [ಜಿ ಪೆರಾರಿವಾಲನ್ ಮತ್ತು ತಮಿಳುನಾಡು ಸರ್ಕಾರ ನಡುವಣ ಪ್ರಕರಣ].

ತಮ್ಮ ಶಿಕ್ಷೆ ಹಿಂಪಡೆಯಬೇಕು ಎಂದು ಕೋರಿ ಪೆರಾರಿವಾಲನ್‌ ಅರ್ಜಿ ಸಲ್ಲಿಸಿದ್ದರು. ಪೆರಾರಿವಾಲನ್ ಈಗಾಗಲೇ 32 ವರ್ಷಗಳ ಜೈಲುವಾಸ ಅನುಭವಿಸಿದ್ದು ಪೆರೋಲ್ ಮೇಲೆ ಮೂರು ಬಾರಿ ಬಿಡುಗಡೆಯಾದಾಗ ಅವರ ನಡವಳಿಕೆಯ ಬಗ್ಗೆ ಯಾವುದೇ ದೂರುಗಳು ಕಂಡುಬಂದಿಲ್ಲ ಎಂದು ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಬಿ ಆರ್ ಗವಾಯಿ ಅವರಿದ್ದ ಪೀಠ ಹೇಳಿದೆ.

“ಪೆರಾರಿವಾಲನ್ 32 ವರ್ಷಗಳ ಶಿಕ್ಷೆಗೆ ಒಳಗಾಗಿದ್ದಾರೆ ಎಂಬ ಅಂಶಕ್ಕೆ ಸಂಬಂಧಿಸಿದಂತೆ ಯಾವುದೇ ವಿವಾದವಿಲ್ಲ. ಅರ್ಜಿದಾರರನ್ನು ಈ ಹಿಂದೆ ಮೂರು ಬಾರಿ ಪೆರೋಲ್‌ನಲ್ಲಿ ಬಿಡುಗಡೆ ಮಾಡಲಾಗಿದೆ ಮತ್ತು ಬಿಡುಗಡೆಯ ಸಮಯದಲ್ಲಿ ಅವರ ನಡವಳಿಕೆ ಬಗ್ಗೆ ಯಾವುದೇ ದೂರು ಕಂಡು ಬಂದಿರಲಿಲ್ಲ. ಅರ್ಜಿದಾರರು ಪ್ರಸ್ತುತ ಪೆರೋಲ್‌ನಲ್ಲಿದ್ದಾರೆ ಎಂದು ನಮಗೆ ತಿಳಿದು ಬಂದಿದೆ. ಅವರು 30 ವರ್ಷಗಳಿಗಿಂತ ಹೆಚ್ಚು ಕಾಲ ಜೈಲಿನಲ್ಲಿ ಕಳೆದಿದ್ದಾರೆ ಎಂಬುದನ್ನು ಗಮನಿಸಿ ಆತ ಜಾಮೀನಿನ ಮೇಲೆ ಬಿಡುಗಡೆಯಾಗಲು ಅರ್ಹ ಎಂದು ನಾವು ಭಾವಿಸುತ್ತೇವೆ”ಎಂದು ನ್ಯಾಯಾಲಯ ಆದೇಶಿಸಿದೆ.

ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಕೆ ಎಂ ನಟರಾಜ್ “ಪೆರಾರಿವಾಲನ್ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿ. 2014 ರಲ್ಲಿ ಅದನ್ನು ಸುಪ್ರೀಂ ಕೋರ್ಟ್‌ ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿತ್ತು” ಎಂದು ಹೇಳಿ ಜಾಮೀನು ನೀಡುವುದನ್ನು ಬಲವಾಗಿ ವಿರೋಧಿಸಿದರು. ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಜೈಲುವಾಸ ಜೀವಿತಾವಧಿಯವರೆಗೆ ಇರುತ್ತದೆ. ಆತ ಮರಣದಂಡನೆಗೆ ಗುರಿಯಾಗಿದ್ದ. ಈಗಾಗಲೇ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಿದ್ದು ಮತ್ತಷ್ಟು ಹೇಗೆ ಕಡಿಮೆ ಮಾಡಲು ಸಾಧ್ಯ ಎಂದು ಅವರು ಪ್ರಶ್ನಿಸಿದರು.

ಆಗ ನ್ಯಾಯಾಲಯ “ನಾವು ಜಾಮೀನು ನೀಡಬಹುದಾಗಿದ್ದು ಶಿಕ್ಷೆ ಕಡಿತಕ್ಕೆ ಒಳಪಟ್ಟಿರುತ್ತದೆ” ಎಂದರು. ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅವರ ಪದೇಪದೇ ವಿರೋಧದ ಹೊರತಾಗಿಯೂ ಪೆರಾರಿವಾಲನ್‌ ಜಾಮೀನಿನ ಮೇಲೆ ಬಿಡುಗಡೆಯಾಗಲು ಅರ್ಹರಾಗಿದ್ದಾರೆ ಎಂದು ನ್ಯಾಯಾಲಯ ಆದೇಶ ನೀಡಿತು.

“ಜಾಮೀನು ಅರ್ಜಿಯು ವಿಚಾರಣಾ ನ್ಯಾಯಾಲಯದ ಷರತ್ತಿಗೊಳಪಟ್ಟಿರುತ್ತದೆ. ಪ್ರತಿ ತಿಂಗಳ ಮೊದಲನೆಯ ದಿನ ಅವರು (ಪೆರಾರಿವಾಲನ್‌) ಸಿಬಿಐ ಅಧಿಕಾರಿಗೆ ಹಾಜರಿ ನೀಡಬೇಕು. ಪ್ರಸಕ್ತ ಅವರು ಸ್ಥಳೀಯ ಪೊಲೀಸ್‌ ಠಾಣೆಗೆ ಹಾಜರಿ ನೀಡಲಿ,” ಎಂದರು. ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್‌ ತಿಂಗಳಿಗೆ ನಿಗದಿಯಾಗಿದೆ.