ಮನೆ ಕಾನೂನು ವಿಜಯ್ ಮಲ್ಯಗೆ 4 ತಿಂಗಳ ಜೈಲು ಶಿಕ್ಷೆ ವಿಧಿಸಿ ಸುಪ್ರೀಂಕೋರ್ಟ್ ಆದೇಶ

ವಿಜಯ್ ಮಲ್ಯಗೆ 4 ತಿಂಗಳ ಜೈಲು ಶಿಕ್ಷೆ ವಿಧಿಸಿ ಸುಪ್ರೀಂಕೋರ್ಟ್ ಆದೇಶ

0

ನವದೆಹಲಿ(New Delhi):  9,000 ಕೋಟಿಗೂ ಅಧಿಕ ಸಾಲ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯಗೆ ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ 4 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ನ್ಯಾಯಮೂರ್ತಿಗಳಾದ ಉದಯ್ ಉಮೇಶ್ ಲಲಿತ್, ಎಸ್ ರವೀಂದ್ರ ಭಟ್ ಮತ್ತು ಪಿಎಸ್ ನರಸಿಂಹ ಅವರಿದ್ದ ಪೀಠ ಈ ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್ ಪೀಠವು ಮಾರ್ಚ್ 10ರಂದು ಮದ್ಯದ ದೊರೆ ವಿರುದ್ಧದ ಆದೇಶವನ್ನು ಕಾಯ್ದಿರಿಸಿತ್ತು.

2017ರಲ್ಲಿ ನ್ಯಾಯಾಲಯದಿಂದ ಮಾಹಿತಿ ಮುಚ್ಚಿಟ್ಟಿದ್ದಕ್ಕಾಗಿ ನ್ಯಾಯಾಂಗ ನಿಂದನೆ ಆರೋಪದಡಿ ತಪ್ಪಿತಸ್ಥರೆಂದು ಸಾಬೀತಾದ ಉದ್ಯಮಿ ವಿಜಯ್ ಮಲ್ಯ ಅವರಿಗೆ ಸುಪ್ರೀಂ ಕೋರ್ಟ್ ಜೈಲು ಶಿಕ್ಷೆ ಮತ್ತು 2000 ದಂಡ ವಿಧಿಸಿದೆ.

ಇದೇ ವೇಳೆ, ನ್ಯಾಯಾಲಯದ ಆದೇಶ ಮೀರಿ ವರ್ಗಾವಣೆಯಾಗಿರುವ ಬಡ್ಡಿಯೊಂದಿಗೆ 40 ಮಿಲಿಯನ್ ಯುಎಸ್‌ಡಿಯನ್ನು ನಾಲ್ಕು ವಾರಗಳಲ್ಲಿ ಠೇವಣಿ ಮಾಡುವಂತೆ ಮಲ್ಯ ಅವರಿಗೆ ಪೀಠವು ಸೂಚಿಸಿದೆ, ವಿಫಲವಾದರೆ ಅವರ ಆಸ್ತಿಯನ್ನು ಜಪ್ತಿ ಮಾಡಲಾಗುವುದು ಎಂದು ಮಲ್ಯ ಕುಟುಂಬ ವರ್ಗದವರಿಗೆ ಸೂಚಿಸಿದೆ.

ವಿವಿಧ ಅಂಶಗಳ ಕುರಿತು ಹಿರಿಯ ವಕೀಲ ಮತ್ತು ಅಮಿಕಸ್ ಕ್ಯೂರಿ ಜೈದೀಪ್ ಗುಪ್ತಾ ಅವರ ವಾದ ಆಲಿಸಿದ ನಂತರ, ಮಾರ್ಚ್ 15 ರೊಳಗೆ ಲಿಖಿತ ಸಲ್ಲಿಕೆಗಳನ್ನು ಸಲ್ಲಿಸಲು ಮಲ್ಯ ಅವರನ್ನು ಪ್ರತಿನಿಧಿಸುತ್ತಿದ್ದ ವಕೀಲರಿಗೆ ಅನುಮತಿ ನೀಡಲು ಸುಪ್ರೀಂ ಕೋರ್ಟ್ ನಿರ್ಧರಿಸಿತ್ತು.

ಆದರೆ, ಬ್ರಿಟನ್‌ನಲ್ಲಿರುವ ತಮ್ಮ ಕಕ್ಷಿದಾರರಿಂದ ಯಾವುದೇ ಸೂಚನೆ ಬರದ ಹಿನ್ನೆಲೆಯಲ್ಲಿ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ನೀಡಲಾಗುವ ಶಿಕ್ಷೆಯ ಪ್ರಮಾಣಕ್ಕೆ ಸಂಬಂಧಿಸಿದಂತೆ ವಾದಿಸಲು ಸಾಧ್ಯವಾಗುತ್ತಿಲ್ಲ ಎಂದು ಮಲ್ಯ ಪರ ವಕೀಲರು ಮಾರ್ಚ್ 10 ರಂದು ಪೀಠಕ್ಕೆ ತಿಳಿಸಿದ್ದರು.