ಮನೆ ರಾಜ್ಯ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರದ ಒತ್ತಡ – ಜಮಾಯತ್ ಮುಖ್ಯಸ್ಥ ಮದನಿ ವಿವಾದ

ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರದ ಒತ್ತಡ – ಜಮಾಯತ್ ಮುಖ್ಯಸ್ಥ ಮದನಿ ವಿವಾದ

0

ಭೋಪಾಲ್‌ : ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರದ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಜಮಾಯತ್ ಉಲಮಾ-ಇ-ಹಿಂದ್ ಅಧ್ಯಕ್ಷ ಮೌಲಾನಾ ಮಹಮೂದ್ ಮದನಿ ವಿವಾದಿತ ಹೇಳಿಕೆ ನೀಡಿದ್ದಾರೆ.

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಜಮಾಯತ್ ಉಲಮಾ-ಇ-ಹಿಂದ್ ಸಂಘಟನೆಯ ಆಡಳಿತ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್‌, ಕೇಂದ್ರ ಸರ್ಕಾರದ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ನಾಲಿಗೆ ಹರಿಬಿಟ್ಟರಲ್ಲದೇ, ಸಂವಿಧಾನವನ್ನ ಸಂಪೂರ್ಣವಾಗಿ ಜಾರಿಗೊಳಿಸುವಲ್ಲಿ ವಿಫಲವಾದ್ರೆ ಆ ಸಂಸ್ಥೆ ಸರ್ವೋಚ್ಛ ಎಂಬುದಕ್ಕೆ ಅರ್ಹವಲ್ಲ ಎಂದು ಹೇಳಿ, ವಿವಾದ ಸೃಷ್ಟಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಇಸ್ಲಾಂ ಮತ್ತು ಮುಸ್ಲಿಮರ ವಿರುದ್ಧ ದ್ವೇಷ ಹರಡುವ ಪ್ರಯತ್ನಗಳು ತೀವ್ರಗೊಂಡಿವೆ. ಪವಿತ್ರ ಇಸ್ಲಾಮಿಕ ಜಿಹಾದ್‌ ಪರಿಕಲ್ಪನೆಯನ್ನ ಉದ್ದೇಶಪೂರ್ವಕವಾಗಿ ವಿರೂಪಗೊಳಿಸಲಾಗುತ್ತಿದೆ. ಭಯೋತ್ಪಾದನೆ ಜೊತೆಗೆ ಸಮೀಕರಿಸಲಾಗುತ್ತಿದೆ. ʻಲವ್‌ ಜಿಹಾದ್‌, ಲ್ಯಾಂಡ್‌ ಜಿಹಾದ್‌, ಸ್ಪಿಟ್‌ ಜಿಹಾದ್‌ನಂತಹ ಪದಗಳನ್ನು ಮುಸ್ಲಿಮರಿಗೆ ಕೆಣಕಲು ಬಳಸಲಾಗುತ್ತಿದೆ.

ಇಸ್ಲಾಂನಲ್ಲಿ ಜಿಹಾದ್‌ ಅಂದ್ರೆ ಅನ್ಯಾಯ ಮತ್ತು ದಬ್ಬಾಳಿಕೆಯ ವಿರುದ್ಧದ ಹೋರಾಟ, ದಬ್ಬಾಳಿಕೆ ಇದ್ದಾಗೆಲ್ಲ ಜಿಹಾದ್‌ ಇರುತ್ತೆ. ಆದ್ರೆ‌ ಈಗ ಈ ಪದವನ್ನ ಮುಸ್ಲಿಮರ ವಿರುದ್ಧ ದ್ವೇಷಬಿತ್ತಲು ಬಳಸಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೇ ದೇಶಾದ್ಯಂತ ಮುಸ್ಲಿಮರನ್ನು ಅವರ ಧಾರ್ಮಿಕ ಉಡುಗೆ, ತೊಡುಗೆ, ಗುರುತು ಹಾಗೂ ಜೀವನಶೈಲಿಗಾಗಿ ಗುರಿಯಾಗಿಸಲಾಗುತ್ತಿದೆ. ಇದರಿಂದ ಶಿಕ್ಷಣ, ಉದ್ಯೋಗ ಹಾಗೂ ಸಾಮಾಜಿಕ ಜೀವನದಲ್ಲಿ ಸಾಕಷ್ಟು ಅಡೆತಡೆಗಳನ್ನ ಎದುರಿಸಬೇಕಾಗಿದೆ ಎಂದಿದ್ದಾರೆ.

ಇದೇ ವೇಳೆ ವಕ್ಫ್‌ ತಿದ್ದುಪಡಿ ಕಾಯ್ದೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ಮಾತನಾಡಿದ ಅವರು, ವಕ್ಫ್‌ ಮುಸ್ಲಿಮರಿಂದ ರಚಿಸಲ್ಪಟ್ಟ ಟ್ರಸ್ಟ್‌ ಆಗಿದೆ. ಅದರಲ್ಲಿ ಹಸ್ತಕ್ಷೇಪವನ್ನ ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ ಎಂದರಲ್ಲದೇ, ಮುಸ್ಲಿಂ ಯುವಕರು ಹತಾಶೆಯನ್ನು ಬಿಟ್ಟು ಎಚ್ಚೆತ್ತುಕೊಳ್ಳಬೇಕು. ಜೊತೆಗೆ ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಕಾಪಾಡಿಕೊಳ್ಳಬೇಕು ಎಂದು ಎಚ್ಚರಿಸಿದರು.

ಮದನಿ ಹೇಳಿಕೆಗೆ ಬಿಜೆಪಿಯಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಕ್ರೀಡೆ ಮತ್ತು ಯುವ ಕಲ್ಯಾಣ ಸಚಿವ ವಿಶ್ವಾಸ್ ಸಾರಂಗ್ ಮಾತನಾಡಿ, ಭಾರತದ ಗಾಳಿಯಲ್ಲೇ ಉಸಿರಾಡುವ, ಭಾರತದ ನೀರನ್ನು ಕುಡಿಯುವ ಯಾರೇ ಆದ್ರೂ ವಂದೇ ಮಾತರಂ ಪ್ರಶ್ನೆ ಮಾಡಿದ್ರೆ ಅದು ಸಾಂವಿಧಾನಿಕ ವ್ಯವಸ್ಥೆಗೆ ಮಾಡಿದ ಅಪಮಾನವಾಗುತ್ತದೆ. ಎಡಪಂಥೀಯ ಚಿಂತನೆಗಳನ್ನು ಬಿತ್ತುತ್ತಿದ್ದ ಮದನಿ ಈಗ ಸಂವಿಧಾನಕ್ಕೆ ಅಗೌರವ ತೋರುತ್ತಿರುವುದು, ಸುಪ್ರೀಂ ಕೋರ್ಟ್‌ ಮೇಲೆ ದಾಳಿ ಮಾಡುತ್ತಿರುವುದು ದುರದೃಷ್ಟಕರ ಎಂದು ಕಿಡಿ ಕಾರಿದ್ದಾರೆ.