ಮನೆ ಕಾನೂನು ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ಗೌರಿ ನೇಮಕ ತಡೆಗೆ ಸುಪ್ರೀಂ ನಿರಾಕರಣೆ: ಮದ್ರಾಸ್ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ...

ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ಗೌರಿ ನೇಮಕ ತಡೆಗೆ ಸುಪ್ರೀಂ ನಿರಾಕರಣೆ: ಮದ್ರಾಸ್ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಪದಗ್ರಹಣ

0

ವಕೀಲೆ ಎಲ್ ವಿಕ್ಟೋರಿಯಾ ಗೌರಿ ಅವರನ್ನು ಮದ್ರಾಸ್ ಹೈಕೋರ್ಟ್’ನ ಹೆಚ್ಚುವರಿ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾಗೊಳಿಸಿತು. ಅತ್ತ ಸುಪ್ರೀಂ ಕೋರ್ಟ್’ನಲ್ಲಿ ವಿಚಾರಣೆ ನಡೆಯುತ್ತಿರುವಂತೆಯೇ ಇತ್ತ ಮದ್ರಾಸ್ ಹೈಕೋರ್ಟ್’ನಲ್ಲಿ ಗೌರಿ ಅವರು ಹೆಚ್ಚುವರಿ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದರು. 

ಗೌರಿ ಅವರು ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮ ಆರಂಭವಾಗುವ ಐದು ನಿಮಿಷಗಳ ಮೊದಲು ಸುಪ್ರೀಂ ಕೋರ್ಟ್’ನಲ್ಲಿ ಬೆಳಿಗ್ಗೆ 10.30ಕ್ಕೆ ವಿಚಾರಣೆ ಆರಂಭವಾಯಿತು. “ಅರ್ಜಿಯಲ್ಲಿ ಪ್ರಸ್ತಾಪಿಸಲಾದ ವಿಚಾರ ಗೌರಿ ಅವರ ಅರ್ಹತೆಗೆ ಸಂಬಂಧಿಸಿದ್ದಲ್ಲ ಬದಲಿಗೆ ಅವರ ಸೂಕ್ತತೆಗೆ ಸಂಬಂಧಿಸಿದೆ. ಇದು ವ್ಯಕ್ತಿನಿಷ್ಠ ವಿಶ್ಲೇಷಣೆಯಾಗಲಿದ್ದು ನ್ಯಾಯಾಲಯ ಇದನ್ನು ಪರಿಶೀಲಿಸಲಾಗದು ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಬಿ ಆರ್ ಗವಾಯಿ ಅವರಿದ್ದ ಪೀಠ ವಿವರಿಸಿತು.

ಗೌರಿ ವಿರುದ್ಧದ ಎಲ್ಲಾ ವಿಚಾರಗಳನ್ನು ಕೊಲಿಜಿಯಂ ಪರಿಗಣಿಸಿರಬಹುದಾಗಿದ್ದು ಕೊಲಿಜಿಯಂ ನಿರ್ಧಾರದಲ್ಲಿ ಸುಪ್ರೀಂ ಕೋರ್ಟ್ ತಡವಾಗಿ ಮಧ್ಯಪ್ರವೇಶಿಸುವುದಿಲ್ಲ. ನಾವು ರಿಟ್ ಅರ್ಜಿಯನ್ನು ಪುರಸ್ಕರಿಸುತ್ತಿಲ್ಲ. ಕಾರಣ ವಿವರಿಸಲಾಗುವುದು ಎಂಬುದಾಗಿ ಪೀಠ ತಿಳಿಸಿತು.

ಗೌರಿ ಅವರ ನೇಮಕಾತಿ ಪ್ರಶ್ನಿಸಿ ಮದ್ರಾಸ್ ಹೈಕೋರ್ಟ್ ಸಲ್ಲಿಸಿದ್ದ ಅರ್ಜಿಯಲ್ಲಿ ಆಕೆ ಧರ್ಮದ ಆಧಾರದಲ್ಲಿ ಜನರ ವಿರುದ್ಧ ಬಲವಾದ ಪೂರ್ವಾಗ್ರಹ ಪ್ರದರ್ಶಿಸಿದ್ದಾರೆ ಎಂದು ಆರೋಪಿಸಲಾಗಿತ್ತು.  ಆರ್’ಎಸ್’ಎಸ್ ಪತ್ರಿಕೆ ʼಆರ್ಗನೈಸರ್ʼನಲ್ಲಿ ಕೆಲ ವರ್ಷಗಳ ಹಿಂದೆ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವಂತಹ ಲೇಖನ ಬರೆದಿದ್ದು, ವಿವಾದಾತ್ಮಕ ಸಂದರ್ಶನ, ಬಿಜೆಪಿಯೊಂದಿಗಿನ ನಂಟು, ಹಾಗೂ ತನ್ನ ಆಕ್ಷೇಪಾರ್ಹ ವಿಚಾರಗಳ ಬಗ್ಗೆ ಕೊಲಿಜಿಯಂಗೆ ಮಾಹಿತಿ ನೀಡದೇ ಇದ್ದುದನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ರಾಜು ರಾಮಚಂದ್ರನ್, ʼಸಂವಿಧಾನದ 217ನೇ ವಿಧಿಯಡಿಯಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ಅರ್ಹತೆಗೆ ಕೆಲವು ಷರತ್ತುಗಳಿದ್ದು ಸಾರ್ವಜನಿಕ ವಲಯದಲ್ಲಿ ಗೌರಿ ಅವರ ಹೇಳಿಕೆಗಳು ಹುದ್ದೆಗೆ ಸ್ವಯಂ ಅನರ್ಹವಾಗಿಸಿವೆʼ ಎಂದು ವಾದಿಸಿದರು.

ಈ ವಿಚಾರಗಳನ್ನು ಕೊಲಿಜಿಯಂ ವಿಶ್ಲೇಷಿಸಿದೆ ಎಂದು ನ್ಯಾಯಾಲಯ ಹೇಳಿದಾಗ ರಾಜು ಅವರು “ ಇದು ಗೌರಿಯವರ ರಾಜಕೀಯ ಭಾಷಣ ಅಥವಾ ಅಭಿಪ್ರಾಯಕ್ಕೆ ಸಂಬಂಧಿಸಿದ ವಿಷಯವಲ್ಲ ಆದರೆ ಅವರ ಅನೇಕ ಹೇಳಿಕೆಗಳು ದ್ವೇಷ ಭಾಷಣಗಳಾಗಿವೆ ಎಂದರು. ಆಗ ಪೀಠ ಗೌರಿ ವಿರುದ್ಧದ ಎಲ್ಲಾ ವಿಚಾರಗಳನ್ನು ಕೊಲಿಜಿಯಂ ಪರಿಗಣಿಸಿರಬಹುದಾಗಿದೆ ಕೊಲಿಜಿಯಂ ನಿರ್ಧಾರದಲ್ಲಿ ಸುಪ್ರೀಂ ಕೋರ್ಟ್ ತಡವಾಗಿ ಮಧ್ಯಪ್ರವೇಶಿಸುವುದಿಲ್ಲ ಎಂದಿತು.

ʼಗೌರಿ ಅವರು ಹೆಚ್ಚುವರಿ ನ್ಯಾಯಮೂರ್ತಿಯಾಗಿ ಮಾತ್ರ ಅಧಿಕಾರ ಸ್ವೀಕರಿಸಿದ್ದು ಕೊಲಿಜಿಯಂ ತನ್ನ ನಿರ್ಧಾರ ಮರುಪರಿಶೀಲಿಸಬಹುದು. ಮತ್ತು ಹೆಚ್ಚುವರಿ ನ್ಯಾಯಮೂತಿಯಾಗಿ ಗೌರಿ ಅವರ ಅಧಿಕಾರಾವಧಿ ಮುಗಿದ ಬಳಿಕ ಅವರನ್ನು ಖಾಯಂ ಮಾಡದೇ ಇರಬಹುದು. ಇಂತಹ ಅನೇಕ ನಿದರ್ಶನಗಳಿವೆʼ ಎಂದು ನ್ಯಾಯಾಲಯ ಹೇಳಿತು.

ಜನವರಿ 17ರಂದು ಮದ್ರಾಸ್ ಹೈಕೋರ್ಟ್’ಗೆ ಗೌರಿ ಅವರನ್ನು ನೇಮಕ ಮಾಡಿದಂದಿನಿಂದ ಅವರು ವಿವಾದದ ಕೇಂದ್ರ ಬಿಂದುವಾಗಿದ್ದರು. ಗೌರಿಯವರ ವಿಶ್ವಾಸಾರ್ಹತೆ ಮತ್ತು ರಾಜಕೀಯ ಪಕ್ಷವಾದ ಬಿಜೆಪಿಯೊಂದಿಗಿನ ಅವರ ನಂಟಿನ ಕುರಿತು ನ್ಯಾಯಿಕ ವಲಯ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ನಡೆದಿತ್ತು.

ಗೌರಿ ಅವರಿಗೆ ಸಂಬಂಧಿಸಿದ ಕೆಲವು ವಿಚಾರಗಳು ಕೊಲಿಜಿಯಂ ಗಮನಕ್ಕೆ ಬಂದಿವೆ ಎಂದು ಸೋಮವಾರ ತಿಳಿಸಿದ್ದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಪ್ರಕರಣವನ್ನು ಇಂದು  (ಮಂಗಳವಾರ) ಬೆಳಿಗ್ಗೆ ತುರ್ತಾಗಿ ವಿಚಾರಣೆ ನಡೆಸಲು ಅನುಮತಿಸಿದ್ದರು. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಂ ಎಂ ಸುಂದರೇಶ್ ಅವರಿದ್ದ ಪೀಠದ ಮುಂದೆ  38ನೇ ಪ್ರಕರಣವಾಗಿ ವಿಚಾರಣೆ ನಡೆಯಿತು.

ಒಂದೆಡೆ ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣದ ಕುರಿತು ವಿಚಾರಣೆ ನಡೆಯುತ್ತಿರುವಾಗಲೇ ಮತ್ತೊಂದೆಡೆ ಗೌರಿ ಸೇರಿದಂತೆ ನಾಲ್ವರು ಮದ್ರಾಸ್ ಹೈಕೋರ್ಟ್’ನ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಟಿ ರಾಜಾ ಅವರು ಗೌಪ್ಯತಾ ವಿಧಿ ಬೋಧಿಸಿದರು.

ಹಿಂದಿನ ಲೇಖನಮತ್ತೊಮ್ಮೆ 5.6 ತೀವ್ರತೆಯ ಭೂಕಂಪ: ಟರ್ಕಿ, ಸಿರಿಯಾದಲ್ಲಿ 4300ಕ್ಕೂ ಹೆಚ್ಚು ಮಂದಿ ಸಾವು
ಮುಂದಿನ ಲೇಖನಸಂಚಾರ ನಿಯಮ ಉಲ್ಲಂಘನೆ: ಒಂದೇ ದಿನ 7.50 ಕೋಟಿ ದಂಡ ಸಂಗ್ರಹ