ಧಾರವಾಡ: ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಧಾರವಾಡದ ಶಾಸಕ ಹಾಗೂ ಮಾಜಿ ಸಚಿವ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ತೀವ್ರ ಶಾಕ್ ನೀಡಿದ್ದು, ಅವರ ಜಾಮೀನು ರದ್ದುಗೊಳಿಸಿದೆ. ಇದರಿಂದ ಅವರು ಮತ್ತೊಮ್ಮೆ ಜೈಲು ಸೇರಬೇಕಾದ ಸ್ಥಿತಿ ಉದ್ಭವವಾಗಿದೆ.
ಧಾರವಾಡದ ಹೆಬ್ಬಳ್ಳಿ ಗ್ರಾಮ ಪಂಚಾಯತ್ ಸದಸ್ಯನಾಗಿದ್ದ ಯೋಗೀಶ್ ಗೌಡ ಅವರನ್ನು 2016ರ ಜೂನ್ 15ರಂದು ಜಿಮ್‌ನಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಸ್ಥಳೀಯ ಆಂತರಿಕ ರಾಜಕೀಯ ಈ ಕೊಲೆಗೆ ಕಾರಣ ಎಂಬುದಾಗಿ ಶಂಕಿಸಲಾಗಿದ್ದು, ಮೊದಲು ಪೊಲೀಸರು ಬಸವರಾಜ ಮುತ್ತಗಿ ಮತ್ತು ಸಹಚರರನ್ನು ಬಂಧಿಸಿದ್ದರು. ಆದರೆ, ಬಿಎಸ್ ಯಡಿಯೂರಪ್ಪ ಸಿಎಂ ಆದ ನಂತರ ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಯಿತಾದ ಬಳಿಕ, ನಿಜವಾದ ಹೊಣೆಗಾರರು ಬೇರೆ ಎಂಬುದು ಬೆಳಕಿಗೆ ಬಂದಿತು.
2020ರ ನವೆಂಬರ್ 5ರಂದು ಸಿಬಿಐ ವಿಳಂಬವಿಲ್ಲದೆ ವಿನಯ್ ಕುಲಕರ್ಣಿಯನ್ನು ಬಂಧಿಸಿತು. 9 ತಿಂಗಳು ಜೈಲಿನಲ್ಲಿ ಕಳೆದ ಅವರು 2021ರ ಆಗಸ್ಟ್‌ನಲ್ಲಿ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದುಕೊಂಡರು. ಜಾಮೀನು ನೀಡಿದ ಸಂದರ್ಭದಲ್ಲಿಯೇ ಅವರಿಗೆ ಧಾರವಾಡ ಜಿಲ್ಲೆ ಪ್ರವೇಶಿಸಬಾರದು ಎಂಬ ನಿಬಂಧನೆ ವಿಧಿಸಲಾಗಿತ್ತು.
ವಿಚಾರಣೆ ನಡೆಯುತ್ತಿರುವ ನಡುವೆಯೇ ಸಾಕ್ಷಿಗಳಿಗೆ ಹಣದ ಆಮಿಷವೊಡ್ಡಿದ ಆರೋಪ ಕೇಳಿಬಂದಿದ್ದು, ಇದನ್ನು ಸಿಬಿಐ ದೃಢಪಡಿಸಿದೆ. ವಿನಯ್ ಕುಲಕರ್ಣಿಯ ಮಾವ ಚಂದ್ರಶೇಖರ ಇಂಡಿ ಕೂಡ ಈ ಆರೋಪದಲ್ಲಿ ಸಿಕ್ಕಿ ಬಿದ್ದಿದ್ದಾರೆ. ಸಾಕ್ಷಿಗಳಾದ ಸುರೇಶ್ ಮತ್ತು ರಮೇಶ್ ಅವರಿಗೆ ತಲಾ ₹50,000 ನೀಡಲಾಗಿದೆ ಎಂಬುದನ್ನು ಸಿಬಿಐ ದಾಖಲಾತಿಗಳ ಮೂಲಕ ಕೋರ್ಟ್‌ಗೆ ಒದಗಿಸಿದೆ.
ವಿನಯ್ ಕುಲಕರ್ಣಿಯು ಸಾಕ್ಷಿಗಳ ಜೊತೆ ಸಂಪರ್ಕದಲ್ಲಿದ್ದರು ಎಂಬ ವಿಚಾರಗಳು ಸಿಬಿಐ ತನಿಖೆಯಲ್ಲಿ ಸಾಬೀತಾಗಿವೆ. ಹೀಗಾಗಿ ಸಿಬಿಐ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಕೋರ್ಟ್ ಅವರು ಶರತ್ತುಗಳನ್ನು ಉಲ್ಲಂಘಿಸಿದಂತೆ ಹೇಳಿ, ಜಾಮೀನು ರದ್ದುಗೊಳಿಸಿದೆ. ಈ ಆದೇಶದ ಪ್ರಕಾರ, ಕುಲಕರ್ಣಿಯವರು ಒಂದು ವಾರದೊಳಗೆ ಸಿಬಿಐಗೆ ಶರಣಾಗಬೇಕಾಗಿದೆ. ಇದು ತಮ್ಮ ಹೋರಾಟಕ್ಕೆ ಸಿಕ್ಕ ದೊಡ್ಡ ಗೆಲುವು ಅನ್ನೋದು ಪ್ರಕರಣದ ಪ್ರಮುಖ ದೂರುದಾರ ಹಾಗೂ ಕೊಲೆಯಾದ ಯೋಗೀಶ್ ಗೌಡನ ಸಹೋದರ ಗುರುನಾಥ ಗೌಡ ಹೇಳಿದ್ದಾರೆ.
ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಬಸವರಾಜ ಮುತ್ತಗಿ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದರು. ಆದರೆ ಮಾಫಿ ಸಾಕ್ಷಿ ಆಗಲು ಅನುಮತಿ ನೀಡಬಾರದು ಅಂತಾ ವಿನಯ ಪರ ವಕೀಲರು ಸಾಕಷ್ಟು ಹೋರಾಟ ಮಾಡಿದ್ದರು. ಆದರೆ ಕೊನೆಗೂ ಬಸವರಾಜ ಮುತ್ತಗಿಗೆ ಕೋರ್ಟ್ ಮಾಫಿ ಸಾಕ್ಷಿಯಾಗಲು ಅನುಮತಿ ನೀಡಿತ್ತು. ಇದು ವಿನಯ ಕುಲಕರ್ಣಿ ಪಾಲಿಗೆ ದೊಡ್ಡ ಆಘಾತವಾಗಿತ್ತು.
ಹಲವಾರು ಬಾರಿ ಸಾಕಷ್ಟು ಕಾರಣಗಳನ್ನು ನೀಡಿ ವಿನಯ ಕುಲಕರ್ಣಿ ಹಾಗೂ ಇತರ ಆರೋಪಿಗಳು ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸುತ್ತಲೇ ಬಂದಿದ್ದರು. ಇದರಿಂದಾಗಿ ಈ ಪ್ರಕರಣದ ವಿಚಾರಣೆಗೂ ತೊಂದರೆಯಾಗುತ್ತಲೇ ಇತ್ತು. ಆದರೆ ಇದೀಗ ಸಾಕ್ಷಿಗಳಿಗೆ ಆಮಿಷವೊಡ್ಡಿರುವುದು ಸುಪ್ರೀಂ ಕೋರ್ಟ್ ಗಮನಕ್ಕೂ ಬಂದಿದ್ದರಿಂದ ವಿನಯ್ ಕುಲಕರ್ಣಿಗೆ ಕೋರ್ಟ್ ಭಾರೀ ಶಾಕ್ ನೀಡಿದೆ. ಈ ತೀರ್ಪು ಮುಂಬರುವ ದಿನಗಳಲ್ಲಿ ಉಳಿದ ಸಾಕ್ಷಿಗಳಿಗೆ ಕೂಡ ಎಚ್ಚರಿಕೆ ಗಂಟೆಯಾಗೋದು ಸತ್ಯ.














