ಕೆಲಸದ ಹೊರೆ ತಗ್ಗಿಸಲು ಹಿಮಾಚಲ ಪ್ರದೇಶದ ಶಿಮ್ಲಾದಂತಹ ಸ್ಥಳಗಳಲ್ಲಿ ಸಶಸ್ತ್ರ ಪಡೆಗಳ ನ್ಯಾಯಮಂಡಳಿಯ (ಎಎಫ್‌ಟಿ) ಹೆಚ್ಚುವರಿ ಸಂಚಾರಿ ಪೀಠಗಳನ್ನು ಸ್ಥಾಪಿಸಬಹುದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಸಲಹೆ ನೀಡಿದೆ.
ಹಿಮಾಚಲ ಪ್ರದೇಶದ ಶಿಮ್ಲಾದಂತಹ ಸ್ಥಳಗಳ ದಾವೆದಾರರು ಸಶಸ್ತ್ರ ಪಡೆಗಳ ನ್ಯಾಯಮಂಡಳಿಯಲ್ಲಿ ಬಾಕಿ ಇರುವ ತಮ್ಮ ಪ್ರಕರಣಗಳ ವಿಚಾರಣೆಗಾಗಿ ದೂರದ ಚಂಡೀಗಢದವರೆಗೂ ಪ್ರಯಾಣಿಸಬೇಕಾದ ಸ್ಥಿತಿ ಇದ್ದು ಹೆಚ್ಚುವರಿ ಪೀಠಗಳ ಸ್ಥಾಪನೆಯಿಂದ ಅವರ ತೊಳಲಾಟ ಕಡಿಮೆಯಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತು.
“ಪ್ರಾದೇಶಿಕ ಪೀಠ ರಚಿಸಬಹುದೇ ಎಂಬುದನ್ನು ಗಮನಿಸಿ. ಶಿಮ್ಲಾ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಹಿಮಾಚಲ ಪ್ರದೇಶಕ್ಕೆ ಪ್ರಕರಣಗಳನ್ನು ವರ್ಗಾಯಿಸಬಹುದು” ಎಂಬುದಾಗಿ ಕೇಂದ್ರ ಸರ್ಕಾರದ ವಕೀಲರಿಗೆ ಪೀಠ ಸೂಚಿಸಿದೆ.
ದೇಶದ ಸಶಸ್ತ್ರಪಡೆ ನ್ಯಾಯಮಂಡಳಿಗಳು ಸೇರಿದಂತೆ ವಿವಿಧ ನ್ಯಾಯಮಂಡಳಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮದ್ರಾಸ್ ವಕೀಲರ ಸಂಘ ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಎನ್ ಕೆ ಸಿಂಗ್ ಅವರಿದ್ದ ಪೀಠ ಈ ವಿಚಾರ ತಿಳಿಸಿದೆ.
ಸಶಸ್ತ್ರಪಡೆ ನ್ಯಾಯಮಂಡಳಿ ಪೀಠ ಸ್ಥಾಪನೆಯ ಅಂಶ ಪರಿಗಣಿಸುವುದರ ಜೊತೆಗೆ ಅಸ್ತಿತ್ವದಲ್ಲಿರುವ ಎಎಫ್‌ಟಿ ಪೀಠಗಳಲ್ಲಿ ಖಾಲಿ ಇರುವ ಹುದ್ದೆಗಳ ಸ್ಥಿತಿ ಬಗ್ಗೆ ಮಾಹಿತಿ ನೀಡುವಂತೆ ಸರ್ಕಾರಕ್ಕೆ ಅದು ಸೂಚಿಸಿದೆ. ಭರ್ತಿ ಮಾಡದ ನ್ಯಾಯಮಂಡಳಿ ಖಾಲಿ ಹುದ್ದೆಗಳ ಬಗ್ಗೆ ಹಿರಿಯ ವಕೀಲ ವಿಕಾಸ್ ಸಿಂಗ್ ಕಳವಳ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ಆದೇಶ ಜಾರಿಯಾಯಿತು.
ಎಎಫ್‌ಟಿಗಳ ಮುಂದೆ ಒಟ್ಟು ಬಾಕಿ ಇರುವ ಪ್ರಕರಣಗಳು ಮತ್ತು ಕಾರ್ಯಭಾರ ಎದುರಿಸಲು ಪೀಠಗಳ ಅವಶ್ಯಕತೆಗಳ ಕುರಿತು ಕೇಂದ್ರ ಸರ್ಕಾರ ಮಾಹಿತಿ ನೀಡುವಂತೆಯೂ ತಿಳಿಸಿದ ಅದು ಆರು ವಾರಗಳ ಬಳಿಕ ಪ್ರಕರಣ ಆಲಿಸಲು ನಿರ್ಧರಿಸಿತು.
ಭಾರತದ ಅಟಾರ್ನಿ ಜನರಲ್ ಆರ್ ವೆಂಟಕರಮಣಿ, ಅವರು ಖಾಲಿ ಇರುವ ಹುದ್ದೆಗಳ ಭರ್ತಿಯ ಬಗ್ಗೆ ಕೇಂದ್ರ ಸರ್ಕಾರ ತತ್ಪರವಾಗಿದೆ ಎಂದರು. ಹೆಚ್ಚುವರಿ ಪೀಠಗಳ ಸ್ಥಾಪನೆಯಂತಹ ವಿಚಾರದ ಬಗ್ಗೆ ಎಎಫ್‌ಟಿಯ ಅಧ್ಯಕ್ಷರು ತೀರ್ಮಾನ ತೆಗೆದುಕೊಳ್ಳಬಹುದು ಎಂದು ತಿಳಿಸಿದರು.