ನವದೆಹಲಿ: ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಹತ್ಯೆ ಪ್ರಕರಣದಲ್ಲಿ ತನಗೆ ವಿಧಿಸಿರುವ ಮರಣದಂಡನೆ ಶಿಕ್ಷೆ ರದ್ದುಪಡಿಸುವಂತೆ ಕೋರಿ ಬಲ್ವಂತ್ ಸಿಂಗ್ ರಾಜೋನಾ ಅವರು ಸಲ್ಲಿಸಿರುವ ಕ್ಷಮಾದಾನ ಅರ್ಜಿಯನ್ನು ಶೀಘ್ರವೇ ಪರಿಗಣಿಸುವಂತೆ ಸುಪ್ರೀಂ ಕೋರ್ಟ್, ರಾಷ್ಟ್ರಪತಿಗಳ ಕಾರ್ಯದರ್ಶಿಗೆ ಒತ್ತಾಯಿಸಿದೆ.
ಬಲ್ವಂತ್ ಸಿಂಗ್ ರಾಜೋನಾ ಸಲ್ಲಿಸಿರುವ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಮುಂದೆ ಮಂಡಿಸುವುದರ ಜತೆಗೆ ಎರಡು ವಾರಗಳಲ್ಲಿ ಅರ್ಜಿಯನ್ನು ಇತ್ಯರ್ಥಗೊಳಿಸುವಂತೆ ರಾಷ್ಟ್ರಪತಿಗಳ ಕಾರ್ಯದರ್ಶಿಗೆ ಸೂಚಿಸಿದೆ ಎಂದು ಸುದ್ದಿಸಂಸ್ಥೆ ಎಎನ್ಐ ವರದಿ ಮಾಡಿದೆ.
90ರ ದಶಕದಲ್ಲಿ ಪಂಜಾಬ್‌ನಲ್ಲಿ ಖಾಲಿಸ್ತಾನಿ ಉಗ್ರರ ಉಪಟಳ ಹೆಚ್ಚಿತ್ತು. ಇದಕ್ಕೆ ಕಡಿವಾಣ ಹಾಕಲು ಬಿಯಾಂತ್ ಸಿಂಗ್ ಸರ್ಕಾರ ದಿಟ್ಟ ಕಾರ್ಯಾಚರಣೆ ಕೈಗೊಂಡಿತ್ತು. ಇದಕ್ಕೆ ಪ್ರತೀಕಾರವಾಗಿ 1995ರ ಆಗಸ್ಟ್ 31ರಂದು ಪಂಜಾಬ್ ಸಚಿವಾಲಯದ ಹೊರಭಾಗದಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಬಿಯಾಂತ್ ಸೇರಿದಂತೆ 16 ಜನರು ಮೃತಪಟ್ಟಿದ್ದರು.
ಈ ಪ್ರಕರಣದಲ್ಲಿ 2007ರಲ್ಲಿಯೇ ಬಲ್ವಂತ್ ಸಿಂಗ್‌ಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿತ್ತು. ಇದನ್ನು ರದ್ದುಪಡಿಸುವಂತೆ ಕೋರಿ ಆತ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯು ಹಲವು ವರ್ಷಗಳಿಂದ ಇತ್ಯರ್ಥಗೊಂಡಿಲ್ಲ. ಹಾಗಾಗಿ, ಮಾನವೀಯ ನೆಲಗಟ್ಟಿನ ಮೇಲೆ ತನಗೆ ವಿಧಿಸಿರುವ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸಬೇಕು ಎಂದು ಆತ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ.
2023ರ ಮೇ 3ರಂದು ವಿಚಾರಣೆ ನಡೆಸಿದ್ದ ನ್ಯಾಯಪೀಠವು, ಬಲ್ವಂತ್ ಸಿಂಗ್ ಅರ್ಜಿಯನ್ನು ವಜಾಗೊಳಿಸಿತ್ತು. ಜತೆಗೆ, ಕೇಂದ್ರ ಗೃಹ ಇಲಾಖೆಯು ಕ್ಷಮಾದಾನ ಅರ್ಜಿಗಳ ಇತ್ಯರ್ಥ ಸಂಬಂಧ ವಿಳಂಬ ಧೋರಣೆ ತಳೆಯುವುದು ಸರಿಯಲ್ಲ. ಇದು ಕಾನೂನು ಮತ್ತು ಸುವ್ಯವಸ್ಥೆ ಮೇಲೆ ಪರಿಣಾಮ ಬೀರಲಿದೆ ಎಂದು ಅಭಿಪ್ರಾಯಪಟ್ಟಿತ್ತು.