ನವದೆಹಲಿ(Newdelhi): ಪಿಂಚಣಿ ಸೌಲಭ್ಯ, ವೃದ್ಧಾಶ್ರಮಗಳ ಸ್ಥಾಪನೆ ಸೇರಿದಂತೆ ಹಿರಿಯ ನಾಗರಿಕರ ಕಲ್ಯಾಣ ಯೋಜನೆಗಳ ಜಾರಿ ಕುರಿತು ವರದಿ ಸಲ್ಲಿಸುವಂತೆ ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಸುಧಾನ್ಷು ಧುಲಿಯಾ ಅವರಿದ್ದ ನ್ಯಾಯಪೀಠ ಈ ಅದೇಶ ನೀಡಿದ್ದು ಕಲ್ಯಾಣ ಯೋಜನೆಗಳ ಅನುಷ್ಠಾನ, ಪೋಷಕರು ಮತ್ತು ಹಿರಿಯ ನಾಗರಿಕ ಕಾಯ್ದೆಯ ಜಾರಿ ಕುರಿತು ವಸ್ತುಸ್ಥಿತಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದೆ.
ರಾಜ್ಯ ಸರ್ಕಾರಗಳು ಎರಡು ತಿಂಗಳಲ್ಲಿ ಈ ವರದಿ ಸಲ್ಲಿಸಬೇಕು, ನಂತರದ ಒಂದು ತಿಂಗಳಲ್ಲಿ ಕೇಂದ್ರ ಸರ್ಕಾರವು ಪರಿಷ್ಕೃತ ವಸ್ತುಸ್ಥಿತಿ ವರದಿಯನ್ನು ಸಲ್ಲಿಸಬೇಕು ಎಂದೂ ನ್ಯಾಯಪೀಠವು ಸೂಚಿಸಿದೆ.
ಪ್ರಾಥಮಿಕ ಆರೋಗ್ಯ ಸೇವೆ ಒಳಗೊಂಡಂತೆ ವೃದ್ಧಾಶ್ರಮಗಳನ್ನು ದೇಶದಾದ್ಯಂತ ಸ್ಥಾಪಿಸಬೇಕು ಎಂದು ಕೋರಿ ಮಾಜಿ ಕಾನೂನು ಸಚಿವ ಅಶ್ವನಿಕುಮಾರ್ ಸಲ್ಲಿಸಿದ್ದ ಅರ್ಜಿ ಕುರಿತು ಈ ನಿರ್ದೇಶನ ನೀಡಿತು. 2023ರ ಜನವರಿಗೆ ವಿಚಾರಣೆ ಮುಂದೂಡಲಾಯಿತು.