ಮನೆ ಕಾನೂನು ಪ್ರತಿಭಟಿಸಲು ರೈತರಿಗೆ ಹಕ್ಕಿದೆ ಎಂದ ಸುಪ್ರೀಂ; ರೈತರು ರಾಜಧಾನಿಗೆ ಬರಲು ಕಣ್ಮುಚ್ಚಿ ಅನುಮತಿಸಲಾಗದು ಎಂದ ಕೇಂದ್ರ

ಪ್ರತಿಭಟಿಸಲು ರೈತರಿಗೆ ಹಕ್ಕಿದೆ ಎಂದ ಸುಪ್ರೀಂ; ರೈತರು ರಾಜಧಾನಿಗೆ ಬರಲು ಕಣ್ಮುಚ್ಚಿ ಅನುಮತಿಸಲಾಗದು ಎಂದ ಕೇಂದ್ರ

0

ಪ್ರತಿಭಟನಾ ನಿರತ ರೈತರು ತಮ್ಮ ಅಹವಾಲುಗಳನ್ನು ಹೇಳಿಕೊಳ್ಳುವ ಹಕ್ಕು ಹೊಂದಿದ್ದಾರೆ ಎಂದು ಸುಪ್ರೀಂ ಕೋರ್ಟ್‌ ಹೇಳಿದ್ದು ಕೇಂದ್ರ ಮತ್ತು ಪಂಜಾಬ್‌ ಸರ್ಕಾರಗಳು ರೈತರ ಬೇಡಿಕೆಗಳನ್ನು ಪರಿಹರಿಸಲು ತಟಸ್ಥ ವ್ಯಕ್ತಿಗಳ ನಿಯೋಗವನ್ನು ನಿಯೋಜಿಸಬೇಕು ಎಂದು ತಾಕೀತು ಮಾಡಿದೆ.

Join Our Whatsapp Group

ಪಂಜಾಬ್‌ ಮತ್ತು ಹರಿಯಾಣಕ್ಕೆ ಸಂಪರ್ಕ ಸೇತುವೆಯಾಗಿರುವ ಶಂಭೂ ಗಡಿಯನ್ನು ಮುಕ್ತಗೊಳಿಸುವಂತೆ ಹರಿಯಾಣ ಸರ್ಕಾರಕ್ಕೆ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ಮಾಡಿದ್ದ ಆದೇಶ ಪ್ರಶ್ನಿಸಿ ಹರಿಯಾಣ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಆರ್‌ ಮಹಾದೇವನ್‌ ಅವರ ವಿಭಾಗೀಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು.

ರೈತರು ದೆಹಲಿಗೆ ಪ್ರತಿಭಟನೆ ಕೈಗೊಳ್ಳುವುದನ್ನು ತಪ್ಪಿಸುವ ಉದ್ದೇಶದಿಂದ ಹರಿಯಾಣ ಸರ್ಕಾರವು ಗಡಿಯನ್ನು ಮುಚ್ಚಿದೆ. ವಿಚಾರಣೆಯ ಸಂದರ್ಭದಲ್ಲಿ ನ್ಯಾ. ಸೂರ್ಯಕಾಂತ್‌ ಅವರು “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರೈತರಿಗೆ ಪ್ರತಿಭಟಿಸುವ ಹಕ್ಕಿದೆ, ಆದರೆ, ರೈತರು ಟ್ರ್ಯಾಕ್ಟರ್‌ ಮತ್ತು ಜೆಸಿಬಿಗಳ ಜೊತೆ (ರಾಜಧಾನಿಗೆ) ಬರದಂತೆ ಮನವೊಲಿಸಬೇಕು” ಎಂದರು.

ಆಗ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು “ಪ್ರತಿಭಟನಾ ನಿರತ ರೈತರನ್ನು ಅಷ್ಟು ಸುಲಭವಾಗಿ ರಾಜಧಾನಿಗೆ ಪ್ರವೇಶಿಸಲು ಅನುಮತಿಸಲಾಗದು” ಎಂದರು.

ಈ ವೇಳೆ ಪೀಠವು ಸಮಿತಿಯ ಮೂಲಕ ಪ್ರತಿಭಟನಾನಿರತ ರೈತರೊಂದಿಗೆ ಚರ್ಚಿಸುವಂತೆ ನೀಡಿದ್ದ ಸಲಹೆಯನ್ನು ಪುನರುಚ್ಚರಿಸಿತು. “ರೈತರ ಜೊತೆ ಚರ್ಚಿಸಿ. ಇದಕ್ಕಾಗಿ ರಚಿಸುವ ಸಮಿತಿಯ ಸದಸ್ಯರ ಹೆಸರುಗಳನ್ನು ಅಂತಿಮಗೊಳಿಸಿ. ಅನೇಕ ಅತ್ಯುತ್ತಮ ವ್ಯಕ್ತಿಗಳಿದ್ದಾರೆ. ನೀವು ರಾಜಕಾರಣಿಗಳನ್ನು ಕಳುಹಿಸುವುದು ಅವರ ಮನಸ್ಸಿಗೆ ತೊಡಕಾಗಿರಬಹುದು. ಹಾಗಾಗಿ, ತಟಸ್ಥ ವ್ಯಕ್ತಿಗಳನ್ನು ಆಯ್ಕೆ ಮಾಡಿ. ಎರಡೂ ಸರ್ಕಾರಗಳು ಹೆಸರುಗಳನ್ನು ಅಂತಿಮಗೊಳಿಸುವುದು ರೈತರಲ್ಲಿ ಭರವಸೆ ಉಂಟು ಮಾಡಬಹುದು. ನ್ಯಾಯಮೂರ್ತಿಗಳು ತಜ್ಞರಲ್ಲ. ಆದರೆ, ಕೃಷಿ ಹಿನ್ನೆಲೆ ಹೊಂದಿರುವ ನಿವೃತ್ತ ನ್ಯಾಯಮೂರ್ತಿಗಳಿರಬಹುದು, ಅಂತಹವರನ್ನು ಆಯ್ಕೆ ಮಾಡಿ. ಪ್ರಮುಖ ವಿಶ್ವವಿದ್ಯಾಲಯಗಳ ಉಪನ್ಯಾಸಕರು, ಸಂಶೋಧಕರನ್ನು ಆಯ್ಕೆ ಮಾಡಿ. ಸಮಸ್ಯೆ ಬಗೆಹರಿಸಿ” ಎಂದಿತು.

ತಮ್ಮ ಬೇಡಿಕೆ ಈಡೇರಿಕೆಗಾಗಿ ಮತ್ತೊಮ್ಮೆ ದೆಹಲಿಗೆ ಪ್ರತಿಭಟನೆ ಕೈಗೊಳ್ಳಲು ಮುಂದಾಗಿರುವ ರೈತರ ಜೊತೆ ಮಾತುಕತೆ ನಡೆಸುವಂತೆ ಸರ್ಕಾರಕ್ಕೆ ನ್ಯಾಯಾಲಯವು ಕಳೆದ ತಿಂಗಳು ಹೇಳಿತ್ತು.

ಈ ಸಂಬಂಧ ಸಮಿತಿ ರಚಿಸಲು ಸೂಚನೆ ಪಡೆಯುವಂತೆ ಸಾಲಿಸಿಟರ್‌ ಜನರಲ್‌ಗೆ ನ್ಯಾಯಾಲಯ ಸೂಚಿಸಿತ್ತು. ಪಂಜಾಬ್‌ ಮತ್ತು ಹರಿಯಾಣ ಸರ್ಕಾರಗಳು ಸಮಿತಿಯಲ್ಲಿ ಯಾರೆಲ್ಲಾ ಸದಸ್ಯರಾಗಬೇಕು ಎಂಬುದನ್ನು ತಿಳಿಸಬಹುದು ಎಂದು ನ್ಯಾಯಾಲಯ ಹೇಳಿತ್ತು.

ಇಂದಿನ ವಿಚಾರಣೆ ವೇಳೆ ಮೆಹ್ತಾ ಅವರು ಸಮಿತಿ ರಚಿಸಲು ಮತ್ತಷ್ಟು ಸಮಯಾವಕಾಶ ಕೋರಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡರಿಂದಲೂ ಹೆಸರು ಬರಬೇಕು ಎಂದು ನ್ಯಾಯಾಲಯ ಒತ್ತಿ ಹೇಳಿದ್ದು, ವಿಚಾರಣೆಯನ್ನು ಆಗಸ್ಟ್‌ 12ಕ್ಕೆ ಮುಂದೂಡಿದೆ.