ಕಲಬುರಗಿ: ಹೊಸದಾಗಿ ತೆಗೆದುಕೊಂಡ ಎಲೆಕ್ಟ್ರಿಕ್ ಬೈಕ್ ಪದೇ ಪದೆ ಕೈಕೊಟ್ಟಿದ್ದರಿಂದ ಗ್ರಾಹಕನೊಬ್ಬ ಬೈಕ್ ಶೋರೂಂಗೆ ಬೆಂಕಿ ಹಚ್ಚಿದ ಘಟನೆ ಕಲಬುರಗಿ ನಗರದಲ್ಲಿ ಮಂಗಳವಾರ ನಡೆದಿದೆ.
ಹುಮನಾಬಾದ್ ರಸ್ತೆಯಲ್ಲಿರುವ ಓಲಾ ಎಲೆಕ್ಟ್ರಿಕ್ ಬೈಕ್ ಶೋರೂಂಗೆ ಗ್ರಾಹಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ನಂತರ ತಾನಾಗಿಯೇ ಪೊಲೀಸ್ ಠಾಣೆಗೆ ತೆರಳಿ ತಪ್ಪು ಒಪ್ಪಿಕೊಂಡಿದ್ದಾನೆ. ಕಲಬುರಗಿ ನಗರದ ನಿವಾಸಿ ಮಹ್ಮದ್ ನದೀಮ್ ಬೆಂಕಿ ಹಚ್ಚಿದ ಗ್ರಾಹಕನಾಗಿದ್ದು, ಚೌಕ್ ಠಾಣೆ ಪೊಲೀಸರು ಈತನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಮಹ್ಮದ್ ನದೀಮ್ ಮೂರು ದಿನಗಳ ಹಿಂದಷ್ಟೇ ಹೊಸ ಎಲೆಕ್ಟ್ರಿಕ್ ಬೈಕ್ ತೆಗೆದುಕೊಂಡಿದ್ದ. ಆದರೆ, ಪ್ರಾರಂಭದಿಂದಲೂ ಬೈಕ್ನಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಎರಡು ಬಾರಿ ದುರಸ್ತಿ ಮಾಡಿದರೂ ಸರಿಹೋಗಿರಲಿಲ್ಲ. ಹೀಗಾಗಿ ಶೋರೂಂಗೆ ಬಂದಿದ್ದ ವ್ಯಕ್ತಿ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದ್ದ. ಬಳಿಕ ಕೋಪಗೊಂಡು ಪೆಟ್ರೋಲ್ ತೆಗೆದುಕೊಂಡು ಬಂದು ಶೋರೂಂನಲ್ಲಿದ್ದ ಬೈಕ್ಗಳ ಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಮಂಗಳವಾರ ಘಟನೆ ನಡೆದಿದ್ದು, ಬೆಂಕಿಯ ಕೆನ್ನಾಲಿಗೆ ಕ್ಷಣಾರ್ಧದಲ್ಲಿ ಚಾಚಿಕೊಂಡಿದ್ದು, ಶೋರೂಂ ಧಗಧಗಿಸಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದರು. ಶೋರೂಂನಲ್ಲಿದ್ದ ಬೈಕ್ಗಳು ಹಾಗೂ ಸಾಮಗ್ರಿಗಳು ಬೆಂಕಿಗೆ ಆಹುತಿ ಆಗಿದ್ದವು. ಆದರೆ ಶೋರೂಂ ಮಾಲೀಕರು ಇದೊಂದು ಆಕಸ್ಮಿಕ ಘಟನೆ ಎಂದು ಉಹಿಸಿದ್ದರು. ಆದರೆ, ಗ್ರಾಹಕ ಠಾಣೆಗೆ ಹೋಗಿ ಶರಣಾದ ನಂತರ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.