ಮನೆ ರಾಜ್ಯ ಸೂರ್ಯ್‌ ರಥ ಯಾತ್ರೆಗೆ ರಾಜ್ಯದಲ್ಲಿ ಅಧಿಕೃತ ಚಾಲನೆ

ಸೂರ್ಯ್‌ ರಥ ಯಾತ್ರೆಗೆ ರಾಜ್ಯದಲ್ಲಿ ಅಧಿಕೃತ ಚಾಲನೆ

0

ಪಿಎಂ ಸೂರ್ಯ್‌ ಘರ್ ಯೋಜನೆ ಪ್ರಚಾರಕ್ಕೆ ಎಂಎನ್ಆರ್‌ಇಗೆ ರಾಜ್ಯದ ಸಾಥ್

ಬೆಂಗಳೂರು: ದೇಶದ ಒಂದು ಕೋಟಿ ಮನೆಗಳ ಮಲ್ಛಾವಣಿಗೆ ಸೋಲಾರ್ ಫಲಕ ಅಳವಡಿಸುವ ಮೂಲಕ ಉಚಿತ ವಿದ್ಯುತ್‌  ಒದಗಿಸುವ ಸೂರ್ಯ ಘರ್‌ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ರಾಜ್ಯದಲ್ಲಿ ಈ ಕುರಿತ ಪ್ರಚಾರಕ್ಕೆ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್‌ ಗುಪ್ತಾ ಶನಿವಾರ ಅಧಿಕೃತ ಚಾಲನೆ ನೀಡಿದರು.

ಬೆಸ್ಕಾಂ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರ ಗೃಹ ಬಳಕೆಗೆ ಮಾತ್ರ ನೆರವು ನೀಡುವ ಸೂರ್ಯ ಘರ್ ಯೋಜನೆಯ ಹೊಸ ಮತ್ತು ನವೀಕರಿಸಬಹುದಾದದ ಇಂಧನ ಸಚಿವಾಲಯದ ‘ಸೂರ್ಯ ರಥ ಯಾತ್ರೆ’ಗೆ ಹಸಿರು ನಿಶಾನೆ ತೋರಿ ಮಾತನಾಡಿದ ಗೌರವ್ ಗುಪ್ತಾ, “ಯೋಜನೆ ಅನುಷ್ಠಾನಕ್ಕೆ ಆಸಕ್ತಿ ತೋರಿ ರಾಜ್ಯದಲ್ಲಿ ಈವರೆಗೆ 10 ಸಾವಿರ ಮಂದಿ ಅರ್ಜಿಸಲ್ಲಿಸಿದ್ದಾರೆ”, ಎಂದು ಹೇಳಿದರು.

“ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಈ ಯೋಜನೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲು ಆಸಕ್ತಿ ಹೊಂದಿದ್ದು, ಅದಕ್ಕಾಗಿ ವ್ಯಾಪಕ ಪ್ರಚಾರ ಕೈಗೊಳ್ಳಲಾಗುತ್ತದೆ. ಕೇಂದ್ರ ಸರಕಾರದ pmsuryaghar.gov.in ವೆಬ್‌ಸೈಟ್‌ನಲ್ಲಿ ರೂಫ್‌ ಟಾಪ್‌ ಸೋಲಾರ್‌ ವ್ಯವಸ್ಥೆಗೆ ಗೃಹ ಬಳಕೆದಾರರು ಅರ್ಜಿ ಸಲ್ಲಿಸಬಹುದು. ಯೋಜನೆ ಅನುಷ್ಠಾನಕ್ಕೆ ರಾಜ್ಯದಲ್ಲಿ 229 ಖಾಸಗಿ ಪೂರೈಕೆದಾರರು ನೋಂದಣಿ ಮಾಡಿಕೊಂಡಿದ್ದಾರೆ. ಎಂದು” ಅವರು ತಿಳಿಸಿದರು. 

ಕಾರ್ಯಕ್ರಮದಲ್ಲಿ ಎಂಎನ್‌ಆರ್‌ಇ ಜಂಟಿ ಕಾರ್ಯದರ್ಶಿ ದಿನೇಶ್ ಜಗದಾಳೆ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ, ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.‌ರುದ್ರಪ್ಪಯ್ಯ, ಬೆಸ್ಕಾಂ ನಿರ್ದೇಶಕ (ಹಣಕಾಸು) ದರ್ಶನ್‌ ಜೆ. ಉಪಸ್ಥಿತರಿದ್ದರು. 

ಗ್ರಿಡ್ ಸಂಪರ್ಕದ ಲಾಭವೇನು?

*ಮನೆಯ ರೂಫ್‌ ಟಾಪ್ ಸೋಲಾರ್‌ ವ್ಯವಸ್ಥೆಯನ್ನು ಗ್ರಿಡ್‌ ಜತೆಗೆ ಸಂಪರ್ಕಿಸುವುದರಿಂದ 25 ವರ್ಷಗಳ ಕಾಲ ವಿದ್ಯುತ್‌ ಬಿಲ್‌ ಪಾವತಿಸಬೇಕಿಲ್ಲ.

*ಮನೆಗಳ ಮೇಲ್ಛಾವಣೆಯಲ್ಲಿ ಅಳವಡಿಸುವುದರಿಂದ ಹೆಚ್ಚುವರಿ ಜಾಗದ ಅಗತ್ಯ ಇಲ್ಲ.

*ನಿರ್ವಹಣೆ ವೆಚ್ಚ ತೀರಾ ಕಡಿಮೆ.

ಸಬ್ಸಿಡಿ:

1 ಕಿ.ಲೋ. ವ್ಯಾಟ್‌ ಸಾಮರ್ಥ್ಯದ ವ್ಯವಸ್ಥೆಗೆ  30,000 ರೂ. ಸಬ್ಸಿಡಿ ದೊರೆಯುತ್ತಿದ್ದು, 2 ಕಿಲೋ ವ್ಯಾಟ್‌ ಸಾಮರ್ಥ್ಯದ ವ್ಯವಸ್ಥೆಗೆ 60,000 ರೂ. ಸಬ್ಸಿಡಿ ನಿಗದಿಪಡಿಸಲಾಗಿದೆ. 3 ಕಿಲೋ ವ್ಯಾಟ್‌ ಮೇಲ್ಪಟ್ಟ ವ್ಯವಸ್ಥೆಗೆ ಗರಿಷ್ಠ ಸಬ್ಸಿಡಿ ಮಿತಿ 78,000 ರೂ. ದೊರೆಯಲಿದೆ.