ದುಬೈ(Dubai): ಭಾರತದ ಸೂರ್ಯಕುಮಾರ್ ಯಾದವ್ ಮತ್ತು ಸ್ಮೃತಿ ಮಂದಾನ ಅವರು ಐಸಿಸಿ ನೀಡುವ ಕ್ರಮವಾಗಿ ವರ್ಷದ ಟಿ20 ಪುರುಷ ಕ್ರಿಕೆಟಿಗ ಮತ್ತು ಮಹಿಳಾ ಆಟಗಾರ್ತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.
ಸೂರ್ಯ ಅವರೊಂದಿಗೆ, ಟಿ20 ವಿಶ್ವಕಪ್ ವಿಜೇತ ತಂಡ ಇಂಗ್ಲೆಂಡ್’ನ ಆಲ್’ರೌಂಡರ್ ಸ್ಯಾಮ್ ಕರನ್, ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಮತ್ತು ಜಿಂಬಾಬ್ವೆಯ ಆಲ್’ರೌಂಡರ್ ಸಿಕಂದರ್ ರಾಜಾ ಕೂಡ ಸ್ಪರ್ಧೆಯಲ್ಲಿದ್ದಾರೆ.
ಮಹಿಳೆಯರ ವಿಭಾಗದಲ್ಲಿ ಪಾಕಿಸ್ತಾನದ ಆಲ್’ರೌಂಡರ್ ನಿದಾ ದರ್, ನ್ಯೂಜಿಲೆಂಡ್’ನ ಸೋಫಿ ಡಿವೈನ್ ಮತ್ತು ಆಸ್ಟ್ರೇಲಿಯಾದ ತಹ್ಲಿಯಾ ಮೆಗ್ರಾ ಕೂಡ ಪಟ್ಟಿಯಲ್ಲಿದ್ದಾರೆ.
ಈ ವರ್ಷ ಅದ್ಭುತ ಫಾರ್ಮ್’ನಲ್ಲಿರುವ ಸೂರ್ಯ, 2022ರಲ್ಲಿ ಟಿ20 ಮಾದರಿಯಲ್ಲಿ ಒಂದು ಸಾವಿರ ರನ್ ಪೂರ್ಣಗೊಳಿಸಿದ ವಿಶ್ವದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ.
1164 ರನ್ ಗಳಿಸುವ ಮೂಲಕ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಶ್ರೇಯ ಪಡೆದಿದ್ದಾರೆ.
ಕಳೆದ ವರ್ಷ ಪ್ರಶಸ್ತಿಗೆ ಭಾಜನರಾಗಿದ್ದ ಮಂದಾನ, ಈ ವರ್ಷವೂ ಸ್ಥಿರ ಬ್ಯಾಟಿಂಗ್ ಮೂಲಕ ಗಮನಸೆಳೆದಿದ್ದಾರೆ. ಅತಿ ವೇಗದ ಅರ್ಧಶತಕ (23 ಎಸೆತ) ಗಳಿಸಿದ ಭಾರತದ ಬ್ಯಾಟರ್ ಎನಿಸಿಕೊಂಡಿರುವ ಅವರು ಟಿ20ಯಲ್ಲಿ 2500 ರನ್’ಗಳ ಗಡಿ ದಾಟಿದ್ದಾರೆ.