ಮೈಸೂರು: ಸಂವಿಧಾನದಲ್ಲಿ ಪ್ರತಿಭಟನೆ ಮಾಡುವ ಹಕ್ಕಿದೆ. ಆದರೆ, ಸ್ಪೀಕರ್ ಮೇಲೆ ಪೇಪರ್ ಎಸೆಯೋದು ಮಿತಿ ಮೀರಿದ ವರ್ತನೆ ಮಾಡೋದು ಸರಿಯಲ್ಲ. ಹೀಗಾಗಿ, ೧೮ ಜನ ಶಾಸಕರನ್ನು ಸ್ಪೀಕರ್ ಅಮಾನತು ಮಾಡಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ.ಸಿ. ಮಹದೇವಪ್ಪ ತಿಳಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ೪೦ ವರ್ಷದ ರಾಜಕೀಯ ಜೀವನದಲ್ಲಿ ಈ ರೀತಿಯ ಗಲಾಟೆ ನೋಡಿರಲಿಲ್ಲ. ಗಲಾಟೆ ಮಾಡಿದವರನ್ನ ಅಮಾನತು ಮಾಡದೆ ಬೇರೆ ದಾರಿ ಸ್ಪೀಕರ್‌ಗೆ ಇರಲಿಲ್ಲ. ಹೀಗಾಗಿ, ಸ್ಪೀಕರ್ ೧೮ ಶಾಸಕರನ್ನು ಅಮಾನತು ಮಾಡಿದ್ದಾರೆ ಎಂದರು.
ಸಂಸದೀಯ ಭಾಷೆಯೆ ಅಲ್ಲಿ ಬಳಕೆಯಾಗಲಿಲ್ಲ. ನಾನು ೪೦ ವರ್ಷದಲ್ಲಿ ಈ ತರಹದ ಸ್ಥಿತಿ ಕಂಡಿರಲಿಲ್ಲ. ಪ್ರಜಾಪ್ರಭುತ್ವದ ಆಶಯಗಳನ್ನ ಬಿಜೆಪಿ ಗಾಳಿಗೆ ತೂರಿದೆ. ಸ್ಪೀಕರ್ ಪೀಠಕ್ಕೆ ನುಗ್ಗುತ್ತಾರೆ ಎಂದರೆ ಇವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇದೆಯಾ? ಎಂದು ಅವರು ಕಿಡಿಕಾರಿದರು.
ಶಾಸಕರು ಬಳಸುವ ಭಾಷೆ ಕಳಪೆಯಾಗಿದೆ. ದ್ವೇಷ ಭಾಷಣ ಹೆಚ್ಚಾಗಿದೆ. ಇದರಿಂದ ಪ್ರಜಾಪ್ರಭುತ್ವದ ನಡವಳಿಕೆಗೆ ಕಪ್ಪು ಚುಕ್ಕೆ ಬರುತ್ತೆ. ೧೮ ಜನರ ಅಮಾನತು ತೀರ್ಮಾನ ಸ್ಪೀಕರ್ ಮಾಡಿದ್ದಾರೆ. ಎಲ್ಲವನ್ನೂ ನೋಡಿಯೇ ತೀರ್ಮಾನ ಮಾಡಿದ್ದಾರೆ ಎಂದು ಅವರು ಸ್ಪೀಕರ್ ಕ್ರಮವನ್ನು ಸಮರ್ಥಿಸಿಕೊಂಡರು.
ಧರ್ಮವೂ ಕೊಳೆಯುತ್ತಿದೆ, ರಾಜಕಾರಣವೂ ಕೊಳೆಯುತ್ತಿದೆ, ನೈತಿಕತೆಯೂ ಕೊಳೆಯುತ್ತಿದೆ. ಎಲ್ಲಾ ಕ್ಷೇತ್ರದ ಪ್ರಕಾರಗಳು ಅಧಃಪತನದ ಹಾದಿ ಹಿಡಿದಿವೆ. ಇದೆಲ್ಲಾ ಸಹಜವಾಗಿ ಬೇಸರ ತರಿಸುತ್ತಿದೆ ಎಂದರು.
ಸಿಎಂ ಆರೋಗ್ಯ ಚೆನ್ನಾಗಿದೆ: ಸಿಎಂ ಅವರ ರಾಜಕೀಯ ಆರೋಗ್ಯ ಬಹಳ ಚೆನ್ನಾಗಿದೆ. ನಮ್ಮ ಸರ್ಕಾರದ ಅವಧಿ ಇನ್ನೂ ಮೂರು ವರ್ಷ ಇದೆ. ಸಿದ್ದರಾಮಯ್ಯನವರೇ ಆರ್ಥಿಕ ಸಚಿವರಾಗಿರುವ ಕಾರಣ ಮುಂದಿನ ಮೂರು ಬಜೆಟ್ ಕೂಡ ಅವರೇ ಮಂಡಿಸುತ್ತಾರೆ. ಇದರಲ್ಲಿ ಯಾವ ಅನುಮಾನಗಳು ಯಾರಿಗೂ ಬೇಡ ಎಂದು ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು.
ಮತ್ತೆ ಇದು ಪ್ರಶ್ನೆ ಕೇಳುವ ವಿಚಾರವೂ ಅಲ್ಲ. ಅವರೇ ಆರ್ಥಿಕ ಸಚಿವರಾದ ಮೇಲೆ ಅವರೇ ಬಜೆಟ್ ಮಂಡಿಸಬೇಕು ತಾನೇ ಎಂದು ಪ್ರಶ್ನಿಸಿದರು.
ಬಿಜೆಪಿಯವರು ಸುಮ್ಮನೆ ಸಿಎಂ ಬದಲಾವಣೆ ಬಗ್ಗೆ ಮಾತನಾಡುತ್ತಾರೆ. ಅವರು ಮೊದಲು ಅವರ ಪಕ್ಷವನ್ನು ಶಿಸ್ತಾಗಿ ಇಟ್ಟುಕೊಳ್ಳಲಿ. ನಮ್ಮ ಬಗ್ಗೆ ಅವರಿಗೆ ಯಾಕೆ ಚಿಂತೆ. ಸಿಎಂ ಬಗ್ಗೆ ಮಾತನಾಡಿದರೆ ಕೆಲವರಿಗೆ ಹೊಟ್ಟೆ ಕಿಚ್ಚು ಆಗಬಹುದು. ಸಣ್ಣ ಮನಸ್ಸಿನ ಜನರಿಗೆ ಆ ತರಹದ ಮನಃಸ್ಥಿತಿ ಇದೆ.ಆದರೆ, ಅದೇ ಕಾರಣಕ್ಕೆ ರಾಜಕೀಯವಾಗಿ ಟಾರ್ಗೆಟ್ ಆಗುತ್ತೇವೆ ಎಂಬುದನ್ನ ನಾನು ಒಪ್ಪುವುದಿಲ್ಲ ಎಂದರು.