ಬೆಂಗಳೂರು(Bengaluru): ಯುವಕನೊಬ್ಬನ ಬ್ಯಾಗ್’ನಲ್ಲಿ ಗಾಂಜಾ (ಮಾರಿಯೋನಾ) ಇರಿಸಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದ ಇಬ್ಬರು ಪೊಲೀಸ್ ಕಾನ್ಸ್’ಟೇಬಲ್’ಗಳನ್ನು ಸೋಮವಾರ ಅಮಾನತು ಮಾಡಿ, ಶಿಸ್ತುಕ್ರಮ ಜರುಗಿಸಿರುವುದಾಗಿ ಡಿಸಿಪಿ ಸಿ.ಕೆ.ಬಾವಾ ತಿಳಿಸಿದ್ದಾರೆ.
ವಿಚಾರಣೆಯು ಮುಕ್ತಾಯಗೊಂಡಿದ್ದು, ವಿಚಾರಣಾಧಿಕಾರಿ ನೀಡಿದ ವರದಿ ಆಧರಿಸಿ ಶಿಸ್ತುಕ್ರಮ ಜರುಗಿಸಲಾಗಿದೆ. ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಬಾವಾ ಹೇಳಿದ್ದಾರೆ.
ಕಳೆದ ವಾರ ಈ ಸಂಬಂಧ ಸರಣಿ ಟ್ವೀಟ್ ಮಾಡಿದ್ದ ವೈಭವ್ ಪಾಟೀಲ್ ಎನ್ನುವವರು ಬೆಂಗಳೂರಿನ ಎಚ್ಎಸ್ಆರ್ ಲೇಔಟ್’ನಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಯಿಂದ ಕಿರುಕುಳಕ್ಕೆ ಒಳಗಾಗಿದ್ದ ಬಗ್ಗೆ ನೋವಿನಿಂದ ಬರೆದುಕೊಂಡಿದ್ದರು. ಅನಗತ್ಯವಾಗಿ ನನ್ನನ್ನು ಮಾದಕ ವಸ್ತು ಕಾಯ್ದೆ ಪ್ರಕರಣಕ್ಕೆ ಸಿಲುಕಿಸಲಾಗುತ್ತಿದೆ ಎಂದು ಅವರು ದೂರಿದ್ದರು.
ಆರು ತಿಂಗಳ ಹಿಂದೆ ಹಿಮಾಚಲ ಪ್ರದೇಶದಿಂದ ಬೆಂಗಳೂರಿಗೆ ಪಾಟೀಲ್ ಬಂದಿದ್ದಾರೆ. ಎಚ್’ಎಸ್’ಆರ್ ಲೇಔಟ್’ನ ಕಂಪನಿಯೊಂದರಲ್ಲಿ ಕೆಲಸ ಮಾಡುವ ಅವರು ತಿಂಗಳಿಗೆ ಸುಮಾರು ₹ 22,000 ಸ್ಟೇಫಂಡ್ ಪಡೆಯುತ್ತಿದ್ದಾರೆ.
ಎಚ್ಎಸ್ಆರ್ ಲೇಔಟ್’ನಲ್ಲಿ ರಾಪಿಡೊ ಬೈಕ್ ಟ್ಯಾಕ್ಸಿಯಲ್ಲಿ ಹೋಗುತ್ತಿದ್ದಾಗ ಪೊಲೀಸರು ನನ್ನನ್ನು ತಡೆದರು. ಅವರ ಪ್ರಶ್ನೆಗಳಿಗೆ ನಾನು ಉತ್ತರಿಸಿದೆ. ಓರ್ವ ಕಾನ್ಸ್ಟೆಬಲ್ ನನ್ನ ಬ್ಯಾಗ್ ತಪಾಸಣೆ ಮಾಡಬೇಕೆಂದರು. ನಾನು ಕೊಟ್ಟೆ. ಮತ್ತೊಬ್ಬರು ನನ್ನ ಬಳಿಗೆ ಬಂದು ಎಲ್ಲಿ ಕೆಲಸ ಮಾಡುತ್ತೀ ಎಂದು ಪ್ರಶ್ನೆಗಳನ್ನು ಕೇಳಿದರು. ‘ನೀನು ಗಾಂಜಾ ಸೇದ್ತೀ ಅಲ್ವಾ’ ಎಂದು ಕೇಳಿದಾಗ ನಾನು ನಿರಾಕರಿಸಿದೆ. ಅವರು ತಾವೇ ನನ್ನ ಬ್ಯಾಗ್’ನಲ್ಲಿ ಗಾಂಜಾ ಪೊಟ್ಟಣ ಇರಿಸಿ, ಅದನ್ನು ಬ್ಯಾಗ್ನಿಂದ ಹೊರಗೆ ತೆಗೆದಂತೆ ನಾಟಕವಾಡಿದರು. ಗಾಂಜಾ ಸೇದುವುದಾಗಿ ಒಪ್ಪಿಕೊಳ್ಳುವಂತೆ ಒತ್ತಾಯಿಸಿದರು.
ನನ್ನನ್ನು ಬಂಧಿಸುವ ನಾಟಕವಾಡಿ ನನ್ನ ಬಳಿಯಿದ್ದ 2,500 ಕಿತ್ತುಕೊಂಡರು. ಮನೆ ತಲುಪಲು ಕನಿಷ್ಠ 100 ಕೊಡಿ ಎಂದರೂ ಕೇಳಲಿಲ್ಲ. ನಾನು ಕೊನೆಗೆ ಊಬರ್ ಬುಕ್ ಮಾಡಿ ಮನೆ ಸೇರಿಕೊಂಡೆ. ನಂತರ ಈ ಬಗ್ಗೆ ಸರಣಿ ಟ್ವೀಟ್ ಮಾಡಿದ್ದೆ. ಪೊಲೀಸ್ ಅಧಿಕಾರಿ ನನ್ನನ್ನು ಗುರುತಿಸಿ, ನೆರವಾದರು. ನನ್ನ ಅಧಿಕೃತ ಹೇಳಿಕೆ ದಾಖಲಿಸಿದ ನಂತರ ಈ ಟ್ವೀಟ್’ಗಳನ್ನು ಡಿಲೀಟ್ ಮಾಡಿದೆ ಎಂದು ಪಾಟೀಲ್ ವಿವರಿಸಿದರು.