ಮನೆ ಕ್ರೀಡೆ ಟಿ–20 ವಿಶ್ವಕಪ್‌: ಫೈನಲ್ ಪ್ರವೇಶಿಸಿದ ಪಾಕಿಸ್ತಾನ

ಟಿ–20 ವಿಶ್ವಕಪ್‌: ಫೈನಲ್ ಪ್ರವೇಶಿಸಿದ ಪಾಕಿಸ್ತಾನ

0

ಸಿಡ್ನಿ: ಟಿ–20 ವಿಶ್ವಕಪ್‌ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿದ ಪಾಕಿಸ್ತಾನ ತಂಡ ಫೈನಲ್‌ ಪ್ರವೇಶಿಸಿದೆ.

ನ್ಯೂಜಿಲೆಂಡ್ ನೀಡಿದ್ದ 153 ರನ್‌’ಗಳ ಸಾಧಾರಣ ಗುರಿಯನ್ನು ಬೆನ್ನತ್ತಿದ್ದ ಪಾಕಿಸ್ತಾನ 19.1 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವು ದಾಖಲಿಸುವ ಮೂಲಕ ಮೊದಲ ತಂಡವಾಗಿ ಫೈನಲ್‌ಗೆ ಪ್ರವೇಶ ಪಡೆಯಿತು.

ಗುರಿ ಬೆನ್ನತ್ತಿದ್ದ ಪಾಕಿಸ್ತಾನಕ್ಕೆ ಮೊಹಮ್ಮದ್ ರಿಜ್ವಾನ್ 57 ಮತ್ತು ನಾಯಕ ಬಾಬರ್ ಅಜಂ 53 ರನ್ ಸಿಡಿಸುವ ಮೂಲಕ ಭದ್ರ ಬುನಾದಿ ಹಾಕಿಕೊಟ್ಟರು. ನ್ಯೂಜಿಲೆಂಡ್‌ನ ಶ್ರೇಷ್ಠ ಬೌಲಿಂಗ್ ದಾಳಿಯನ್ನು ಪುಡಿಗಟ್ಟಿದ ಪಾಕಿಸ್ತಾನದ ಬ್ಯಾಟರ್‌’ಗಳು ಗೆಲುವಿನ ನಗೆ ಬೀರಿದರು. ಮೊಹಮ್ಮದ್ ಹ್ಯಾರಿಸ್ 30 ರನ್ ಸಿಡಿಸಿ ಉತ್ತಮ ನೆರವು ನೀಡಿದರು.

ಇದಕ್ಕೂ ಮುನ್ನ, ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್‌’ಗೆ ಅಫ್ರಿದಿ ಆರಂಭದಲ್ಲೇ ಆಘಾತ ನೀಡಿದರು. 4 ರನ್ ಗಳಿಸಿದ್ದ ಆರಂಭಿಕ ಫಿನ್ ಅಲೆನ್‌’ಗೆ ಪೆವಿಲಿಯನ್ ಹಾದಿ ತೋರಿಸಿದರು.

ದಿವೋನ್ ಕಾನ್ವೆ ಸಹ 21 ರನ್‌ಗೆ ರನೌಟ್ ಆಗಿ ನಿರ್ಗಮಿಸಿದರು.ಬಳಿಕ ಎಚ್ಚರಿಕೆಯ ಆಟವಾಡಿದ ಕೇನ್ ವಿಲಿಯಮ್ಸನ್ 46 ರನ್ ಗಳಿಸಿದರೆ, ಅಂತ್ಯದವರೆಗೂ ಆಡಿದ ಮಿಶೆಲ್ 53 ರನ್ ಗಳಿಸಿ ತಂಡದ ಗೌರವಾನ್ವಿತ ಮೊತ್ತ ಪೇರಿಸಲು ನೆರವಾದರು.

ಪಾಕಿಸ್ತಾನದ ಪರ ಶಹೀನ್ ಶಾ ಅಫ್ರಿದಿ 4 ಓವರ್‌ಗಳಲ್ಲಿ 24 ರನ್ ನೀಡಿ 2 ವಿಕೆಟ್ ಉರುಳಿಸಿದರು. ಮಹಮ್ಮದ್ ಸವಾಜ್ 1 ವಿಕೆಟ್ ಪಡೆದರು.

ಒಂದು ಹಂತದಲ್ಲಿ ಸೆಮಿಫೈನಲ್‌ಗೆ ಏರುವುದು ಅಸಾಧ್ಯ ಎನ್ನುವಂತಿದ್ದ ಪಾಕಿಸ್ತಾನ ತಂಡ ಈಗ ಫೈನಲ್ ತಲುಪುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದೆ. ನಾಳೆ ಅಡಿಲೇಡ್‌’ನಲ್ಲಿ ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಗೆಲ್ಲುವ ತಂಡದ ವಿರುದ್ಧ ನ.13ರಂದು ನಡೆಯಲಿರುವ ಫೈನಲ್‌’ನಲ್ಲಿ ಪಾಕಿಸ್ತಾನ ಸೆಣೆಸಲಿದೆ.