ಮನೆ ರಾಜ್ಯ ತಿ.ನರಸೀಪುರ: ಚಿರತೆ ದಾಳಿಗೆ ಮಹಿಳೆ ಬಲಿ

ತಿ.ನರಸೀಪುರ: ಚಿರತೆ ದಾಳಿಗೆ ಮಹಿಳೆ ಬಲಿ

0

ತಿ.ನರಸೀಪುರ: ಮನೆ ಹಿಂಭಾಗದಲ್ಲಿ ಸಂಜೆ ಸೌದೆ ತರಲು ಹೋಗಿದ್ದಾಗ ಚಿರತೆ ದಾಳಿ ಮಾಡಿದ ಪರಿಣಾಮ ಮಹಿಳೆಯೋರ್ವರು ಮೃತಪಟ್ಟಿರುವ ಘಟನೆ ತಾಲ್ಲೂಕಿನ ಕನ್ನನಾಯಕನಹಳ್ಳಿಯಲ್ಲಿ ಶುಕ್ರವಾರ ನಡೆದಿದೆ.

ಸಿದ್ದಮ್ಮ‌ (60) ಮೃತ ದುರ್ದೈವಿ.

ಮುಖ ಹಾಗೂ ಕತ್ತಿನ ಬಳಿ ತೀವ್ರ ಗಾಯವಾಗಿದ್ದರಿಂದ ಸ್ಥಳದಲ್ಲೇ ಅಸುನೀಗಿದ್ದಾರೆ.

ಸ್ಥಳಕ್ಕೆ ಎಸಿಎಫ್ ಲಕ್ಷ್ಮೀಕಾಂತ್, ವಲಯ ಅರಣ್ಯಾಧಿಕಾರಿ ಸೈಯದ್ ನದೀಮ್, ಉಪ ವಲಯಾರಣ್ಯಾಧಿಕಾರಿಗಳಾದ ಮಂಜುನಾಥ್, ಉಮೇಶ್ ಭೇಟಿ ನೀಡಿ ಪರಿಶೀಲಿಸಿದರು.

ಕನ್ನನಾಯಕನ ಹಳ್ಳಿಗೆ ಭೇಟಿ ನೀಡಿದ ಶಾಸಕ ಅಶ್ವಿನ್ ಕುಮಾರ್‌ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಬಳಿಕ ಮಾತನಾಡಿದ ಅವರು, ಇಂತಹ ಘಟನೆಗಳು ಮರುಕಳಿಸುತ್ತಿರುವುದು ಗ್ರಾಮಸ್ಥರನ್ನು ಆತಂಕಕ್ಕೀಡು ಮಾಡಿದೆ. ಚಿರತೆ ಸೆರೆಗೆ ಶನಿವಾರದಿಂದಲೇ ಕಾರ್ಯಾಚರಣೆ ಆರಂಭಿಸಬೇಕು. ಕ್ಯಾಮೆರಾಗಳನ್ನು ಅಳವಡಿಸಿ ಚಿರತೆ ಚಲನವಲನಗಳ ಮೇಲೆ ನಿಗಾ ವಹಿಸಬೇಕು ಎಂದು ಡಿಸಿಎಫ್ ಮಹೇಶ್, ಎಸಿಎಫ್ ಲಕ್ಷ್ಮೀಕಾಂತ್ ಅವರಿಗೆ ಸೂಚಿಸಿದರು.

ಕಳೆದ ಅಧಿವೇಶನದಲ್ಲಿ ಈ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದೆ. ವನ್ಯಜೀವಿ ಹಾವಳಿ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇನೆ. ಮೃತ ಸಿದ್ದಮ್ಮ ಅವರ ಕುಟುಂಬದವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ದೊರಕಿಸಿಕೊಡಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ಗ್ರಾಮದ ನಾಲ್ಕು ದಿಕ್ಕುಗಳಲ್ಲಿ ಶನಿವಾರ ಬೆಳಿಗ್ಗೆ ಬೋನುಗಳನ್ನು ಇರಿಸಿ ಚಿರತೆ ಸೆರೆಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದರು.

ತಹಶೀಲ್ದಾರ್ ಸಿ.ಜಿ.ಗೀತಾ, ಬನ್ನೂರು ಮತ್ತು ತಿ.ನರಸೀಪುರ ಠಾಣೆ ಪೊಲೀಸ್ ಸಿಬ್ಬಂದಿ, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಮನ್ನೆಹುಂಡಿ ಮಹೇಶ್, ಎಂ.ರಮೇಶ್, ಕೊತ್ತೇಗಾಲ ಬಸವರಾಜು ಇದ್ದರು.