ಜುಲೈ 1 ರಿಂದ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ಟೀಮ್ ಇಂಡಿಯಾ, ಐದು ಟಿ-20 ಮತ್ತು ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ. ಆದರೆ ಈ ಪ್ರವಾಸದ ಭಾಗವಾಗಿರುವ ಟಿ20 ಸರಣಿಯ ಕೆಲ ಪಂದ್ಯಗಳ ಸಮಯ ಬದಲಾವಣೆ ಮಾಡಲಾಗಿದೆ. ಮೂಲ ವೇಳಾಪಟ್ಟಿಯ ಪ್ರಕಾರ, ಎರಡನೇ ಟಿ20 ಹೊರತುಪಡಿಸಿ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 11:00 ಗಂಟೆಗೆ (ಇಂಗ್ಲೆಂಡ್‌ನಲ್ಲಿ ಸಂಜೆ 6:30) ಪ್ರಾರಂಭವಾಗಬೇಕಿದ್ದು ಆದಾಗ್ಯೂ, ಭಾರತದಲ್ಲಿ ವೀಕ್ಷಕರಿಗೆ ಅನುಕೂಲವಾಗುವಂತೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಸಮಯವನ್ನು ಬದಲಾಯಿಸಿದ್ದು, ಒಂದು ಗಂಟೆ ಮುಂಚಿತವಾಗಿ ಪಂದ್ಯ ಪ್ರಾರಂಭಿಸಲು ನಿರ್ಧರಿಸಿದೆ ಎನ್ನಲಾಗಿದೆ.

ಇದರ ಪರಿಣಾಮವಾಗಿ, ಈ ಪಂದ್ಯಗಳು ಈಗ ಭಾರತೀಯ ಕಾಲಮಾನ ರಾತ್ರಿ 10:00 ಗಂಟೆಗೆ ಪ್ರಾರಂಭವಾಗಲಿವೆ. ಎರಡನೇ ಟಿ20ಯ ಆರಂಭದ ಸಮಯದಲ್ಲಿ ಯಾವುದೇ ಬದಲಾವಣೆಗಳಿರಲ್ಲ, ಪಂದ್ಯಗಳು ಸಂಜೆ 7:00 ಗಂಟೆಗೆ ನಡೆಯಲಿವೆ. ಅದೇ ರೀತಿ, ಮೊದಲ ಏಕದಿನ ಪಂದ್ಯವನ್ನು ನಿಗದಿತ ವೇಳಾಪಟ್ಟಿಯ ಪ್ರಕಾರ ಸಂಜೆ 5:30ಕ್ಕೆ ಪ್ರಾರಂಭಿಸಲು ನಿರ್ಧರಿಸಲಾಗಿತ್ತು. ಆದರೆ, ಆ ಸಮಯವನ್ನು ಮಧ್ಯಾಹ್ನ 3:30ಕ್ಕೆ ಬದಲಿಸಲಾಗಿದೆ. ಎರಡನೇ ಮತ್ತು ಮೂರನೇ ಏಕದಿನ ಪಂದ್ಯಗಳ ಸಮಯದಲ್ಲಿ ಯಾವುದೇ ಬದಲಾವಣೆಗಳಿರಲ್ಲ. ಎರಡನೇ ಏಕದಿನ ಪಂದ್ಯವನ್ನು ಸಂಜೆ 5:30ಕ್ಕೆ ಮತ್ತು ಮೂರನೇ ಪಂದ್ಯವನ್ನು ಮಧ್ಯಾಹ್ನ 3:30 ಕ್ಕೆ ನಿಗದಿಪಡಿಸಲಾಗಿದೆ.

ಆದರಿಂದ ಮೂರು ಪಂದ್ಯಗಳ ಏಕದಿನ ಸರಣಿಯ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿವೆ ಎಂದು ವರದಿಗಳು ಸೂಚಿಸುತ್ತವೆ. ವಿರಾಟ್ ಕೊಹ್ಲಿ ಪ್ರಸ್ತುತ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಕಾರಣ, ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಲಭ್ಯರಾಗುತ್ತಾರೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ನಂತರ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತೀಯ ತಂಡವನ್ನು ಹೆಸರಿಸಲಾಗುವುದು ಎಂದು ಬಿಸಿಸಿಐ ಈ ಹಿಂದೆ ಘೋಷಿಸಿತ್ತು. ಆದಾಗ್ಯೂ ಟಿ20 ಸರಣಿಗೆ ಈಗಾಗಲೇ ಭಾರತ ತಂಡ ಪ್ರಕಟಗೊಂಡಿದೆ ಎಂದು ತಿಳಿದುಬಂದಿದೆ.














