ಲಂಡನ್’ನ ಓವಲ್ ಮೈದಾನದಲ್ಲಿ ನಡೆದ ಟಿ20 ಬ್ಲಾಸ್ಟ್ ಲೀಗ್’ನಲ್ಲಿ ಸಿಡಿಲಬ್ಬರದ ಶತಕ ಸಿಡಿಸುವ ಮೂಲಕ ಶಾನ್ ಅಬಾಟ್ ಹೊಸ ದಾಖಲೆ ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಂಟ್ ತಂಡದ ನಾಯಕ ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಸರ್ರೆ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ವಿಲ್ ಜಾಕ್ಸ್ (17), ಲೌರಿ ಇವನ್ಸ್ (11) ಬೇಗನೆ ಔಟಾದರೆ, ಇದರ ಬೆನ್ನಲ್ಲೇ ಸ್ಯಾಮ್ ಕರನ್ (15) ಹಾಗೂ ಟಾಮ್ ಕರನ್ (16) ಕೂಡ ವಿಕೆಟ್ ಒಪ್ಪಿಸಿದ್ದರು.
ಈ ಹಂತದಲ್ಲಿ 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಾನ್ ಅಬಾಟ್ ಅಕ್ಷರಶಃ ಅಬ್ಬರಿಸಿದರು. ಕ್ರೀಸ್ಗೆ ಆಗಮಿಸುತ್ತಿದ್ದಂತೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಆಸ್ಟ್ರೇಲಿಯಾ ಆಟಗಾರ ಕೆಂಟ್ ಬೌಲರ್ ಗಳ ಬೆಂಡೆತ್ತಿದ್ದರು.
ಅದರಲ್ಲೂ ಕೇನ್ ರಿಚರ್ಡ್ಸನ್ ಅವರ ಓವರ್ಗಳಲ್ಲಿ ಮೂರು ಸಿಕ್ಸ್ ಹಾಗೂ ಮೂರು ಫೋರ್ ಬಾರಿಸುವ ಮೂಲಕ ಒಟ್ಟು 30 ರನ್ ಚಚ್ಚಿದರು. ಅಲ್ಲದೆ 11 ಸಿಕ್ಸ್ ಹಾಗೂ 4 ಫೋರ್ ನೊಂದಿಗೆ ತೂಫಾನ್ ಬ್ಯಾಟಿಂಗ್ ನಡೆಸಿ ಕೇವಲ 34 ಎಸೆತಗಳಲ್ಲಿ ಶಾನ್ ಅಬಾಟ್ ಭರ್ಜರಿ ಶತಕ ಪೂರೈಸಿದರು.
ಈ ಸಿಡಿಲಬ್ಬರದ ಶತಕದೊಂದಿಗೆ ಟಿ20 ಬ್ಲಾಸ್ಟ್ನಲ್ಲಿ ಅತೀ ವೇಗದ ಶತಕ ಬಾರಿಸಿದ ದಾಖಲೆಯನ್ನು ಶಾನ್ ಅಬಾಟ್ ತಮ್ಮದಾಗಿಸಿಕೊಂಡರು. ವಿಶೇಷ ಎಂದರೆ 19 ವರ್ಷಗಳ ಹಿಂದೆ ಕೆಂಟ್ ತಂಡದ ಪರ ಕಣಕ್ಕಿಳಿದ ಆ್ಯಂಡ್ರೊ ಸೈಮಂಡ್ಸ್ ಕೇವಲ 34 ಎಸೆತಗಳಲ್ಲಿ ಶತಕ ಬಾರಿಸಿ ದಾಖಲೆ ನಿರ್ಮಿಸಿದ್ದರು. ಇದೀಗ ಆಸ್ಟ್ರೇಲಿಯಾ ಆಟಗಾರನೇ ಈ ದಾಖಲೆಯನ್ನು ಸರಿಗಟ್ಟಿ ಟಿ20 ಬ್ಲಾಸ್ಟ್ ನಲ್ಲಿ ಹೊಸ ಇತಿಹಾಸ ನಿರ್ಮಿಸಿರುವುದು ವಿಶೇಷ.
ಇನ್ನು ಈ ಪಂದ್ಯದಲ್ಲಿ ಒಟ್ಟು 41 ಎಸೆತಗಳನ್ನು ಎದುರಿಸಿದ ಶಾನ್ ಅಬಾಟ್ ಅಜೇಯ 110 ರನ್ ಬಾರಿಸಿದರು. ಈ ಶತಕದ ನೆರವಿನಿಂದ ಸರ್ರೆ ತಂಡವು ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 223 ರನ್ ಕಲೆಹಾಕಿತು.
224 ರನ್ ಗಳ ಬೃಹತ್ ಗುರಿ ಬೆನ್ನತ್ತಿದ ಕೆಂಟ್ ತಂಡವು 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 182 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಸರ್ರೆ ತಂಡವು 41 ರನ್ ಗಳ ಭರ್ಜರಿ ಜಯ ಸಾಧಿಸಿತು. ಇತ್ತ ತೂಫಾನ್ ಶತಕದೊಂದಿಗೆ ಮಿಂಚಿದ್ದ ಶಾನ್ ಅಬಾಟ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.