ಆಸ್ಟ್ರೇಲಿಯಾ: ಸೆಪ್ಟೆಂಬರ್ 20ರಿಂದ ಆರಂಭಗೊಳ್ಳಲಿರುವ ಟಿಂ ಇಂಡಿಯಾ ವಿರುದ್ಧದ ಟಿ20 ಸರಣಿಗೆ ಆಸ್ಟ್ರೇಲಿಯಾ ತಂಡ ಈಗಾಗಲೇ ಪ್ರಕಟಗೊಂಡಿದ್ದು, ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿ ವೇಳೆ ಗಾಯಗೊಂಡಿರುವ ಮೂವರು ಪ್ರಮುಖ ಪ್ಲೇಯರ್ ಇದೀಗ ಮಹತ್ವದ ಸರಣಿಯಿಂದ ಹೊರಬಿದ್ದಿದ್ದಾರೆ.
ತಂಡದ ಪ್ರಮುಖ ಆಟಗಾರರಾದ ಮಿಚೆಲ್ ಮಾರ್ಷ್, ಮಿಚೆಲ್ ಸ್ಟಾರ್ಕ್ ಹಾಗೂ ಮಾರ್ಕಸ್ ಸ್ಟೋಯ್ನಿಸ್ ಸರಣಿಯಿಂದ ಹೊರಗುಳಿಯಲಿದ್ದಾರೆಂದು ಕ್ರಿಕೆಟ್ ಆಸ್ಟ್ರೇಲಿಯಾ ಮಾಹಿತಿ ಹಂಚಿಕೊಂಡಿದೆ.
ಮಿಚೆಲ್ ಸ್ಟಾರ್ಕ್ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದು, ಮಾರ್ಷ್ ಹಾಗೂ ಸ್ಟೋಯ್ನಿಸ್ ಕ್ರಮವಾಗಿ ಪಾದದ ಸಮಸ್ಯೆಗೊಳಗಾಗಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಮೂವರು ಪ್ಲೇಯರ್ಸ್ಗೆ ವಿಶ್ರಾಂತಿ ನೀಡಲಾಗಿದೆ.
ತಂಡದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಈಗಾಗಲೇ ಈ ಟೂರ್ನಿಯಿಂದ ವಿಶ್ರಾಂತಿ ಪಡೆದುಕೊಂಡಿದ್ದಾರೆ. ಇದೀಗ ಮತ್ತೆ ಮೂವರು ಪ್ಲೇಯರ್ಸ್ ಹೊರಗುಳಿಯತ್ತಿರುವ ಕಾರಣ, ತಂಡ ಮತ್ತಷ್ಟು ಸಂಕಷ್ಟಕ್ಕೊಳಗಾಗಿದೆ. ಇದೀಗ ಬದಲಿ ಆಟಗಾರರಾಗಿ ನಾಥನ್ ಎಲ್ಲಿಸ್, ಡೇನಿಯಲ್ ಸ್ಯಾಮ್ಸ್ ಹಾಗೂ ಸೀನ್ ಅಬಾಟ್ ತಂಡ ಸೇರಿಕೊಂಡಿದ್ದಾರೆ.
ಆಸ್ಟ್ರೇಲಿಯಾ ತಂಡ ಆತಿಥೇಯ ಭಾರತದ ವಿರುದ್ಧ ಸೆಪ್ಟೆಂಬರ್ 20ರಂದು ಮೊಹಾಲಿ, ಸೆಪ್ಟೆಂಬರ್ 23ರಂದು ನಾಗ್ಪುರ್ದಲ್ಲಿ ಟಿ20 ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಲಿದೆ. ಇದರ ಬೆನ್ನಲ್ಲೇ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯಲ್ಲಿ ಭಾಗಿಯಾಗಲಿದೆ. ತದನಂತರ ಆಸ್ಟ್ರೇಲಿಯಾದಲ್ಲಿ ವಿಶ್ವಕಪ್ ಟೂರ್ನಾಮೆಂಟ್ ನಡೆಯಲಿದೆ. ಮೂರು ಟೂರ್ನಿಗಳಿಗೋಸ್ಕರ ಈಗಾಗಲೇ ಟೀಂ ಇಂಡಿಯಾ ಪ್ರಕಟಗೊಂಡಿದೆ.
ಆಸ್ಟ್ರೇಲಿಯಾ ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಹಾರ್ದಿಕ್ ಪಾಂಡ್ಯಾ, ಆರ್. ಅಶ್ವಿನ್, ಯಜುವೇಂದ್ರ ಚಹಲ್, ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್, ಮಹಮ್ಮದ್. ಶಮಿ, ಹರ್ಷಲ್ ಪಟೇಲ್, ದೀಪಕ್ ಚಹರ್, ಜಸ್ಪ್ರೀತ್ ಬೂಮ್ರಾ
ಟೀಂ ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ ಸರಣಿ: ಸೆಪ್ಟೆಂಬರ್ 20, 1ನೇ ಟಿ20 (ಮೊಹಾಲಿ)ಸೆಪ್ಟೆಂಬರ್ 23, 2ನೇ ಟಿ20 (ನಾಗ್ಪುರ)
ಸೆಪ್ಟೆಂಬರ್ 25, 3ನೇ ಟಿ20 (ಹೈದರಾಬಾದ್)