ಸಿಡ್ನಿ: ಶ್ರೀಲಂಕಾ ವಿರುದ್ಧದ ಮಹತ್ವದ ಪಂದ್ಯದಲ್ಲಿ ಗೆಲುವು ಸಾಧಿಸಿದ ಇಂಗ್ಲೆಂಡ್ ತಂಡ ಈ ಬಾರಿಯ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದೆ.
ಇದರಿಂದಾಗಿ ಹಾಲಿ ಚಾಂಪಿಯನ್ ಮತ್ತು ಆತಿಥೇಯ ತಂಡ ಆಸ್ಟ್ರೇಲಿಯಾ ಟೂರ್ನಿಯಿಂದ ಹೊರಬಿದ್ದಿದೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 141 ರನ್ ಕಲೆಹಾಕಿತ್ತು.
ಆರಂಭಿಕ ಬ್ಯಾಟರ್ ಪಾಥುಮ್ ನಿಶಾಂಕ ಹೊರತು ಪಡಿಸಿ ಉಳಿದವರಿಂದ ಸಾಮರ್ಥ್ಯಕ್ಕೆ ತಕ್ಕ ಆಟ ಮೂಡಿಬರಲಿಲ್ಲ. 45 ಎಸೆತಗಳನ್ನು ಎದುರಿಸಿದ ನಿಶಾಂಕ 2 ಬೌಂಡರಿ ಮತ್ತು 5 ಸಿಕ್ಸರ್ ಸಹಿತ 67 ರನ್ ಕಲೆಹಾಕಿದರು.
ಈ ಸಾಧಾರಣ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಜಾಸ್ ಬಟ್ಲರ್ ಮತ್ತು ಅಲೆಕ್ಸ್ ಹೇಲ್ಸ್ ಉತ್ತಮ ಅಡಿಪಾಯ ಹಾಕಿಕೊಟ್ಟರು.
ಈ ಜೋಡಿ ಮೊದಲ ವಿಕೆಟ್‌ಗೆ 7.2 ಓವರ್‌ಗಳಲ್ಲಿ 77 ರನ್ ಕಲೆಹಾಕಿತು. ಬಟ್ಲರ್ 28 ರನ್ ಗಳಿಸಿದರೆ, ಬಿರುಸಾಗಿ ಬ್ಯಾಟ್ ಬೀಸಿದ ಹೇಲ್ಸ್ ಕೇವಲ 29 ಎಸೆತಗಳಲ್ಲಿ 47ರನ್ ಚಚ್ಚಿ ಔಟಾದರು.
ಬಳಿಕ ಚೇತರಿಸಿಕೊಂಡ ಶ್ರೀಲಂಕಾ, ಕೊನೆವರೆಗೂ ಹೋರಾಟ ನಡೆಸಿತು.
ಹ್ಯಾರಿ ಬ್ರೂಕ್ಸ್ (4), ಲಿಯಾಮ್ ಲಿವಿಂಗ್‌ಸ್ಟೋನ್ (4), ಮೋಯಿನ್ ಅಲಿ (1) ಮತ್ತು ಸ್ಯಾಮ್ ಕರನ್ (6) ವಿಕೆಟ್‌ಗಳನ್ನು ಬೇಗನೆ ಉರುಳಿಸಿ ಸೋಲಿನ ಭೀತಿ ಹುಟ್ಟಿಸಿತು.
ಆದರೆ, ಒಂದೆಡೆ ವಿಕೆಟ್ ಬೀಳುತ್ತಿದ್ದರೂ ನೆಲೆಯೂರಿ ಆಡಿದ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ಇನಿಂಗ್ಸ್’ಗೆ ಬಲ ತುಂಬಿದರು.
36 ಎಸೆತಗಳಲ್ಲಿ ಅಜೇಯ 44 ರನ್ ಗಳಿಸಿದ ಸ್ಟೋಕ್ಸ್ ಆಟದ ನೆರವಿನಿಂದ, ಇಂಗ್ಲೆಂಡ್ ಇನ್ನೂ ಎರಡು ಎಸೆತಗಳು ಬಾಕಿ ಇರುವಂತೆಯೇ 144 ರನ್ ಗಳಿಸಿ 4 ವಿಕೆಟ್ ಅಂತರದ ಜಯ ಸಾಧಿಸಿತು.