ಆಸ್ಟ್ರೇಲಿಯಾ(Australia): ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಅರ್ಹತಾ ಸುತ್ತಿನ ಪಂದ್ಯದಲ್ಲಿ ಯುಎಇ ತಂಡದ ಸ್ಪಿನ್ನರ್ ಕಾರ್ತಿಕ್ ಮೇಯಪ್ಪನ್ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ್ದಾರೆ.
ಆ ಮೂಲಕ ಪ್ರಸ್ತುತ ಟೂರ್ನಿಯಲ್ಲಿ ಹ್ಯಾಟ್ರಿಕ್ ಸಂಪಾದಿಸಿದ ಮೊದಲ ಬೌಲರ್ ಎನಿಸಿದ್ದಾರೆ.
ಸೈಮಂಡ್ಸ್ ಕ್ರೀಡಾಂಗಣದಲ್ಲಿ ಮಂಗಳವಾರ (ಅಕ್ಟೋಬರ್ 18) ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಲಂಕಾ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 152 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿದೆ.
ಆರಂಭಿಕ ಬ್ಯಾಟರ್ ಪಾಥುಮ್ ನಿಶಾಂಕ ಲಂಕಾ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅವರು 60 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 74 ರನ್ ಗಳಿಸಿದರು.
14 ಓವರ್‌ಗಳ ಆಟ ಮುಗಿದಾಗ ಲಂಕಾ ತಂಡ ಕೇವಲ 2 ವಿಕೆಟ್ ನಷ್ಟಕ್ಕೆ 117 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಸವಾಲಿನ ಗುರಿ ನೀಡುವ ಲೆಕ್ಕಾಚಾರದಲ್ಲಿತ್ತು. ಆದರೆ, 15ನೇ ಓವರ್‌ನಲ್ಲಿ ದಾಳಿಗಿಳಿದ ಕಾರ್ತಿಕ್ ಲಂಕನ್ನರ ಯೋಜನೆ ತಲೆಕೆಳಗಾಗಿಸಿದರು.
ಮೊದಲ ಮೂರು ಎಸೆತಗಳಲ್ಲಿ 3 ರನ್ ಬಿಟ್ಟುಕೊಟ್ಟ ಅವರು, ನಂತರದ ಮೂರು ಎಸೆತಗಳಲ್ಲಿ ಕ್ರಮವಾಗಿ ಭಾನುಕ ರಾಜಪಕ್ಸ (5), ಚರಿತ್ ಅಸಲಂಕ (0) ಮತ್ತು ನಾಯಕ ಧಾಸುನ್ ಸನಕ (0) ವಿಕೆಟ್ ಕಿತ್ತರು.
ಇದರಿಂದಾಗಿ ಕೊನೆಯ ಆರು ಓವರ್‌ಗಳಲ್ಲಿ ಲಂಕಾ ರನ್ ಗಳಿಕೆಗೆ ಕಡಿವಾಣ ಬಿದ್ದಿತು. 6 ವಿಕೆಟ್‌ಗಳನ್ನು ಕಳೆದುಕೊಂಡು 38 ರನ್‌ಗಳನ್ನಷ್ಟೇ ಗಳಿಸಿತು.
ಸದ್ಯ ಗುರಿ ಬೆನ್ನತ್ತಿರುವ ಯುಎಇ, 7 ಓವರ್‌ಗಳ ಅಂತ್ಯಕ್ಕೆ 4 ವಿಕೆಟ್‌ಗಳನ್ನು ಕಳೆದುಕೊಂಡು 30 ರನ್ ಕಲೆಹಾಕಿದೆ. ಜಯ ಸಾಧಿಸಿಲು ಉಳಿದಿರುವ 6 ವಿಕೆಟ್‌ಗಳಿಂದ 123 ರನ್ ಗಳಿಸಬೇಕಿದೆ. 78 ಎಸೆತಗಳು ಬಾಕಿ ಇವೆ.