ಟರೂಬ: ನ್ಯೂಜಿಲ್ಯಾಂಡ್‌ನ ವೇಗಿ ಲಾಕೀ ಫರ್ಗ್ಯುಸನ್ ಅಮೋಘ ದಾಖಲೆಯೊಂದನ್ನು ಸ್ಥಾಪಿಸಿದ್ದಾರೆ. ಪಪುವಾ ನ್ಯೂ ಗಿನಿ ವಿರುದ್ಧದ ಸೋಮವಾರದ ಟಿ20 ವಿಶ್ವಕಪ್ ಪಂದ್ಯದಲ್ಲಿ ನಾಲ್ಕೂ ಓವರ್ ಮೇಡನ್ ಮಾಡಿದ್ದಾರೆ. ಒಂದೂ ರನ್ ನೀಡದೆ 3 ವಿಕೆಟ್ ಉಡಾಯಿಸಿದ್ದಾರೆ. ಈ ಪಂದ್ಯದಲ್ಲಿ ಪಿಎನ್‌ಜಿ 19.4 ಓವರ್‌ಗಳಲ್ಲಿ 78ಕ್ಕೆ ಆಲೌಟ್ ಆಯಿತು.
ನ್ಯೂಜಿಲ್ಯಾಂಡ್ 7 ವಿಕೆಟ್‌ಗಳಿಂದ ಗೆಲುವು ಸಾಧಿಸಿತು. 12.2 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 79 ರನ್ ಗಳಿಸಿತು. ಡೆವೊನ್ ಕಾನ್ವೇ 35, ರಚಿನ್ ರವೀಂದ್ರ 6, ನಾಯಕ ಕೇನ್ ವಿಲಿಯಮ್ಸನ್ ಔಟಾಗದೆ 18, ಡ್ಯಾರಿಲ್ ಮಿಚೆಲ್ ಔಟಾಗದೆ 19 ರನ್ ಗಳಿಸಿದರು.
ಇದು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಂಡುಬಂದ 2ನೇ ಹಾಗೂ ಟಿ20 ವಿಶ್ವಕಪ್ ಇತಿಹಾಸದ ಮೊದಲ ನಿದರ್ಶನ. ಪನಾಮಾ ವಿರುದ್ಧ ನಡೆದ 2021ರ ಕೂಲಿಜ್ ಪಂದ್ಯದಲ್ಲಿ ಕೆನಡಾದ ಸಾದ್ ಬಿನ್ ಜಾಫರ್ ಕೂಡ 4 ಓವರ್ ಮೇಡನ್ ಮಾಡಿದ್ದರು. ಅಂದು ಅವರಿಗೆ 2 ವಿಕೆಟ್ ಲಭಿಸಿತ್ತು.