ಕೊಲಂಬೊ : ಚುಟುಕು ವಿಶ್ವ ಕ್ರಿಕೆಟ್ ಸಮರ ಇಂದಿನಿಂದ ಶುರುವಾಗಿದ್ದು, ನೆದರ್ಲೆಂಡ್ ವಿರುದ್ಧ ನಡೆದ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನ ತಿಣುಕಾಡಿ ಗೆದ್ದಿದೆ. ಬೌಲಿಂಗ್ನಲ್ಲಿ ಪರಾಕ್ರಮ ಮೆರೆದರೂ ಅಗ್ರ ಬ್ಯಾಟರ್ಗಳ ವೈಫಲ್ಯದಿಂದ ನೆದರ್ಲೆಂಡ್ ವಿರುದ್ಧ ಕೇವಲ 3 ವಿಕೆಟ್ಗಳ ಗೆಲುವು ಸಾಧಿಸಿದೆ. ಈ ಮೂಲಕ 10ನೇ ಆವೃತ್ತಿಯ ಟಿ20 ವಿಶ್ವಕಪ್ನಲ್ಲಿ ಶುಭಾರಂಭ ಕಂಡಿದೆ.
ಕೊಲಂಬೊದ ಸಿನ್ಹಾಲ್ಸ್ ಸ್ಪೋರ್ಟ್ಸ್ ಕ್ಲಬ್ ಕ್ರಿಕೆಟ್ ಅಂಗಳದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲೆಂಡ್ 19.5 ಓವರ್ಗಳಲ್ಲಿ 147 ರನ್ಗಳಿಗೆ ಆಲೌಟ್ ಆಯಿತು. ಅಲ್ಪ ಮೊತ್ತದ ಗುರಿ ಪಡೆದ ಪಾಕ್ 19.3 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 148 ರನ್ ಬಾರಿಸಿ ಗೆಲುವು ಸಾಧಿಸಿತು.
ಆರಂಭದಲ್ಲಿ ಸ್ಫೋಟಕ ಪ್ರದರ್ಶನಕ್ಕಿಳಿದಿದ್ದ ಪಾಕ್ ಹಾರಾಟಕ್ಕೆ ನೆದರ್ಲೆಂಡ್ ಬ್ರೇಕ್ ಹಾಕಿತ್ತು. 98 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಪಾಕ್ 114 ರನ್ಗಳಿಗೆ ಪ್ರಮುಖ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದ್ರೆ ಕೊನೆಯಲ್ಲಿ ಫಹೀಮ್ ಅಶ್ರಫ್ ಬ್ಯಾಟಿಂಗ್ ನೆರವಿನಿಂದ ಗೆಲುವು ಸಾಧಿಸಿತು.
ಪಾಕ್ ಪರ ಸಾಹಿಬ್ಜಾದಾ ಫರ್ಹಾನ್ 47 ರನ್, ಸೈಮ್ ಅಯೂಬ್ 24 ರನ್, ಫಹೀಮ್ ಅಶ್ರಫ್ 29 ರನ್ ಗಳಿಸಿದ್ರೆ, ಉಳಿದೆಲ್ಲರೂ ಅಲ್ಪಮೊತ್ತಕ್ಕೆ ಔಟಾದರು. ಇನ್ನೂ ಭಾರೀ ನಿರೀಕ್ಷೆ ಹುಟ್ಟಿಸಿದ್ದ ಬಾಬರ್ ಆಜಂ 18 ಎಸೆತಗಳಲ್ಲಿ ಕೇವಲ 15 ರನ್ ಗಳಿಸಿ ಪೆವಿಲಿಯನ್ಗೆ ಮರಳಿದರು. ಇದಕ್ಕೂ ಮುನ್ನ ನೆದರ್ಲೆಂಡ್ ಪರ ನಾಯಕ ಸ್ಕಾಟ್ ಎಡ್ವರ್ಡ್ಸ್ 37 ರನ್, ಬಾಸ್ ಡಿ ಲೀಡ್ 30 ರನ್, ಕಾಲಿನ್ ಅಕರ್ಮನ್ 20 ರನ್, ಮೈಕೆಲ್ ಲೆವಿಟ್ 24 ರನ್ ಗಳಿಸಿದ್ರು. ಉಳಿದವರು ಅಲ್ಪಮೊತ್ತಕ್ಕೆ ಔಟಾದರು.















