ತೈಪೆ: ಭಾರತದ ಖ್ಯಾತ ಶಟ್ಲರ್ ಎಚ್.ಎಸ್. ಪ್ರಣಯ್ ಸುಲಭ ಜಯದೊಂದಿಗೆ ತೈಪೆ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಕೂಟದಲ್ಲಿ ಕ್ವಾರ್ಟರ್ ಫೈನಲ್ ಹಂತಕ್ಕೇರಿದ್ದಾರೆ.
ಕೇವಲ 36 ನಿಮಿಷಗಳ ಹೋರಾಟ ದಲ್ಲಿ ಪ್ರಣಯ್ ಎದುರಾಳಿ ಇಂಡೋ ನೇಷ್ಯಾದ ಟಾಮಿ ಸುಗಿಯಾತೊ ಅವರನ್ನು 21-9, 21-17 ಗೇಮ್ ಗಳಿಂದ ಉರುಳಿಸಿ ಮುನ್ನಡೆದರು. ಮುಂದಿನ ಸುತ್ತಿನಲ್ಲಿ ಪ್ರಣಯ್ ಹಾಂಕಾಂಗ್ ನ ಐದನೇ ಶ್ರೇಯಾಂಕದ ಆ್ಯಂಗಸ್ ಎನ್ಜಿ ಕಾ ಲಾಂಗ್ ಅವರನ್ನು ಎದುರಿಸಲಿದ್ದಾರೆ.
ಕಳೆದ ತಿಂಗಳು ನಡೆದ ಮಲೇಷ್ಯಾ ಮಾಸ್ಟರ್ ಸೂಪರ್ 300 ಕೂಟದ ಪ್ರಶಸ್ತಿ ಜಯಿಸಿದ್ದ ಪ್ರಣಯ್ ಇತ್ತೀ ಚೆಗಿನ ದಿನಗಳಲ್ಲಿ ಉತ್ತಮ ಫಾರ್ಮ್ ನಲ್ಲಿದ್ದಾರೆ. ಕಳೆದ ವಾರ ನಡೆದ ನಡೆದ ಇಂಡೋನೇಷ್ಯಾ ಓಪನ್ ಸೂಪರ್ 1000 ಕೂಟದಲ್ಲಿ ಅಮೋಘ ನಿರ್ವಹಣೆ ನೀಡಿದ್ದ ಅವರು ಸೆಮಿಫೈನಲ್ ತಲು ಪಿದ ಸಾಧನೆ ಮಾಡಿದ್ದರು. ಅಲ್ಲಿ ಅವರು ವಿಶ್ವದ ನಂಬರ್ ವನ್ ಡೆನ್ಮಾರ್ಕ್ ನ ವಿಕ್ಟರ್ ಅಕ್ಸೆಲ್ಸೆನ್ ಅವರಿಗೆ ಶರಣಾಗಿದ್ದರು. ಅಕ್ಸೆಲ್ಸೆನ್ ಅಂತಿಮವಾಗಿ ಪ್ರಶಸ್ತಿ ಜಯಿಸಿದ್ದರು.
ಪ್ರಣಯ್ ಕಣದಲ್ಲಿ ಉಳಿದ ಭಾರತದ ಏಕೈಕ ಸ್ಪರ್ಧಿಯಾಗಿದ್ದಾರೆ. ಈ ಮೊದಲು ಪಾರುಪಳ್ಳಿ ಕಶ್ಯಪ್ ಸ್ಥಳೀಯ ಫೇವರಿಟ್ ಸು ಲೀ ಯಾಂಗ್ ಅವರಿಗೆ 16-21, 17-21 ಗೇಮ್ ಗಳಿಂದ ಶರಣಾಗಿದ್ದರು. ಮಿಕ್ಸೆಡ್ ಡಬಲ್ಸ್ ನಲ್ಲಿ ಸಿಕ್ಕಿ ರೆಡ್ಡಿ ಮತ್ತು ರೋಹನ್ ಕಪೂರ್ ಕೂಡ ಸೋಲನ್ನು ಕಂಡಿದ್ದಾರೆ. ಅವರು ತೈಪೆಯ ಚಿಯು ಸಿಯಾಂಗ್ ಚೀಹ್- ಲಿನ್ ಕ್ಸಿಯಾವೊ ಮಿನ್ ಅವರಿಗೆ 13-21, 18-21 ಗೇಮ್ ಗಳಿಂದ ಶರಣಾದರು.
ತನ್ಯಾ ಕಾಮತ್ ಕೂಡ ಯಾವುದೇ ಪ್ರತಿರೋಧ ನೀಡದೇ ಎದುರಾಳಿ ವಿಶ್ವ ಚಾಂಪಿಯನ್ ಶಿಪ್ ಮತ್ತು ಒಲಿಂಪಿಕ್ ಬೆಳ್ಳಿ ವಿಜೇತೆ ತೈ ಟಿಝು ಯಿಂಗ್ ಅವರಿಗೆ 11-21, 6-21 ಗೇಮ್ ಗಳಿಂದ ಶರಣಾಗಿ ಹೊರಬಿದ್ದರು.