ಬೆಂಗಳೂರು(Bengaluru): ಸಾಮಾಜಿಕ ಜಾಲತಾಣದ ಮೂಲಕ ಕುವೆಂಪು ಮತ್ತು ನಾಡಗೀತೆಯನ್ನು ಅವಮಾನಿಸಿರುವ ಎಲ್ಲರ ವಿರುದ್ಧವೂ ಸೈಬರ್ ಅಪರಾಧ ಕಾನೂನಿನ ಅಡಿ ಕ್ರಮ ತೆಗೆದುಕೊಳ್ಳಬೇಕು ಎಂದು ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ಒತ್ತಾಯಿಸಿದ್ದಾರೆ.
ಈ ವಿಚಾರವಾಗಿ ಸರ್ಕಾರಕ್ಕೆ ಪತ್ರ ಬರೆದ ಹಿನ್ನೆಲೆಯಲ್ಲಿ ಸೋಮವಾರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಸ್ವಾಮೀಜಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ನಾಡಗೀತೆಯನ್ನು ಅವಹೇಳನ ಮಾಡಿದ ವಿಷಯವನ್ನು ಸರ್ಕಾರ ಹಿಂದೆಯೇ ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮ ಕೈಗೊಂಡಿದ್ದರೆ, ಈಗ ಈ ಸ್ಥಿತಿ ಬರುತ್ತಿರಲಿಲ್ಲ. ಈಗಲೂ ಸುಮ್ಮನೆ ಬಿಟ್ಟರೆ ಮುಂದೆ ಬೇರೆ ಯಾರಾದರೂ ರಾಷ್ಟ್ರಗೀತೆಯನ್ನು ಅವಮಾನಿಸಲೂಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದ ಮೂಲಕ ಅವಮಾನಿಸಿದವರು, ಅದನ್ನು ಹಂಚಿಕೊಂಡವರ ವಿರುದ್ಧ ಕ್ರಮತೆಗೆದುಕೊಳ್ಳಬೇಕು ಎಂದು ನಿರ್ಮಲಾ ನಂದನಾಥ ಸ್ವಾಮೀಜಿ ತಿಳಿಸಿದರು ಎಂದೂ ಮೂಲಗಳು ಹೇಳಿವೆ.