ಮನೆ ಸ್ಥಳೀಯ ಮಳೆಯಿಂದ ಹಾನಿಯಾದ  ಮನೆಗಳಿಗೆ ಪರಿಹಾರ ವಿತರಿಸಲು ಕ್ರಮವಹಿಸಿ: ಡಾ. ಕೆ. ವಿ ರಾಜೇಂದ್ರ

ಮಳೆಯಿಂದ ಹಾನಿಯಾದ  ಮನೆಗಳಿಗೆ ಪರಿಹಾರ ವಿತರಿಸಲು ಕ್ರಮವಹಿಸಿ: ಡಾ. ಕೆ. ವಿ ರಾಜೇಂದ್ರ

0

ಮೈಸೂರು: ಅತಿಯಾದ ಮಳೆಯಿಂದ ಮನೆಗಳಿಗೆ ಹಾನಿಯಾಗಿರುವ ಸಂಬಂಧ ಅಧಿಕಾರಿಗಳು ಪರಿಶೀಲನೆ ನಡೆಸಿ ಪರಿಹಾರ ವಿತರಣೆಗೆ ಕೂಡಲೇ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ ಅವರು ತಿಳಿಸಿದರು.

ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ವಿಪತ್ತು ನಿರ್ವಹಣೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಳೆ ಹಾನಿಯಿಂದ ಮನೆ ಬಿದ್ದು ಹೋಗಿರುವವರಿಗೆ ಪರಿಹಾರ ನೀಡಿ ಅವರಿಗೆ ಸೂರು ನಿರ್ಮಿಸಿ ಕೊಡಿ. ತಹಶೀಲ್ದಾರ್, ಕಾರ್ಯಪಾಲಕ ಅಭಿಯಂತರರು ಹಾಗೂ ಕಾರ್ಯ ನಿರ್ವಹಣಾಧಿಕಾರಿ ಗಳು ಸೇರಿ ಮನೆ ಹಾನಿ ಕುರಿತು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಮನೆಯು ಮಳೆ ಹಾನಿಯಿಂದ ಬಿದ್ದಿದೆಯೇ ಎಂಬುದನ್ನು ಪರಿಶೀಲನೆ ನಡೆಸಿ. ಮಳೆಯಿಂದ ಹಾನಿ ಆಗಿರುವ ಮನೆಗಳಿಗೆ ಮೊದಲ ಹಂತದ ಪರಿಹಾರ ಕೂಡಲೇ ವಿತರಣೆ ಮಾಡಬೇಕು. ಈ ಕುರಿತ ಮಾಹಿತಿಯನ್ನು ಸಂಬಂಧಪಟ್ಟ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಕಳುಹಿಸಿ ಕೊಡಬೇಕು ಎಂದು ತಿಳಿಸಿದರು.

ಕಳೆದ 2-3 ವರ್ಷಗಳಿಂದ ಮಳೆಯಿಂದ ಹಾನಿ ಉಂಟಾಗಿದೆ ಎಂದು ಪರಿಹಾರ ಪಡೆದು ಸಹ ಕೆಲವರು ಹೊಸ ಮನೆ ನಿರ್ಮಾಣಕ್ಕೆ ಮುಂದಾಗಿಲ್ಲ. ಈ ಬಗ್ಗೆ ಪರಿಶೀಲನೆ ಮಾಡಿ ಮನೆ ಹಾನಿ ಉಂಟಾಗದೆ ಇರುವವರ ಅರ್ಜಿಗಳನ್ನು ರಿಜೆಕ್ಟ್ ಮಾಡಲು ತಹಶೀಲ್ದಾರರು ಪಟ್ಟಿ ಕಳುಹಿಸಿಕೊಡಬೇಕು ಎಂದು ಮಾಹಿತಿ ನೀಡಿದರು.

ಮಳೆಯಿಂದ ಹಾನಿ ಆಗಿರುವ ಅಂಗನವಾಡಿ, ಶಾಲೆಗಳು ಹಾಗೂ ಪ್ರಾಥಮಿಕ ಅರೋಗ್ಯ ಕೇಂದ್ರಗಳ ದುರಸ್ತಿಗೆ 2 ಲಕ್ಷದ ವರೆಗೆ ಅನುದಾನ ನೀಡಲಾಗುವುದು ಎಂದರು.

ವಿವಿಧ ಯೋಜನೆಗಳಡಿ  ಸರ್ಕಾರದಿಂದ ಪಿಂಚಣಿ ಪಡೆಯುತ್ತಿರುವ ಕೆಲವರು ಮರಣ ಹೊಂದಿದ್ದರೂ ಅವರ ಖಾತೆಗೆ ಪಿಂಚಣಿ ಹೋಗುತ್ತಿದೆ. ಈ ಬಗ್ಗೆ ಪರಿಶೀಲಿಸಿ ಅವರನ್ನು ಪಿಂಚಣಿ ಪಟ್ಟಿಯಿಂದ ಕೈಬಿಡಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಗ್ರಾಮ ಆಡಳಿತಾಧಿಕಾರಿ ಹಾಗೂ ಕಂದಾಯ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಿ, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಕವಿತಾ ರಾಜಾರಾಮ್, ಮೈಸೂರು ಉಪ ವಿಭಾಗಾಧಿಕಾರಿ ರಕ್ಷಿತ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿಂದಿನ ಲೇಖನಮಾರ್ಚ್‌ 31 ರ ಒಳಗಾಗಿ ಬಾಗೇಪಲ್ಲಿ 24 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಪೂರ್ಣಗೊಳಿಸಿ: ಅಧಿಕಾರಿಗಳಿಗೆ ಸಚಿವ ಎನ್‌ ಎಸ್‌ ಬೋಸರಾಜು ಗಡುವು
ಮುಂದಿನ ಲೇಖನಮಡಿಕೇರಿ: ಕಾಡಾನೆ ದಾಳಿಗೆ ಮಹಿಳೆ ಸಾವು