ಬೆಂಗಳೂರು: ಮತ ಎಣಿಕೆ ಕೇಂದ್ರಗಳ ಬಳಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಲೋಕಸಭಾ ಚುನಾವಣೆಯ ಮತ ಎಣಿಕೆ ಸಂಬಂಧಿಸಿದಂತೆ ಪಾಲಿಕೆ ಕೇಂದ್ರ ಕಛೇರಿ ಮುಖ್ಯ ಆಯುಕ್ತರ ಕಛೇರಿಯಲ್ಲಿ ಇಂದು ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯ ಮತ ಎಣಿಕೆಯು 4ನೇ ಮೇ 2024 ರಂದು ನಡೆಯಲಿದ್ದು, ಈ ಸಂಬಂಧ ಮತ ಎಣಿಕೆ ದಿನದಂದು ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲು ಸೂಚಿಸಲಾಯಿತು.
ನಗರದಲ್ಲಿ ಮೂರು ಮತ ಎಣಿಕೆ ಕೇಂದ್ರಗಳು ಬರಲಿದ್ದು, ಚುನಾವಣಾ ಆಯೋಗದ ಮಾರ್ಗಸೂಚಿ ಅನ್ವಯ ಮತ ಎಣಿಕೆ ಕೇಂದ್ರಗಳ ಬಳಿ ಸಿಸಿ ಟಿವಿ ಹಾಗೂ ವೀಡಿಯೋಗ್ರಾಫಿ ವ್ಯವ್ಯಸ್ಥೆ ಮಾಡಿಕೊಳ್ಳಲು ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಿದರು.
ಮತ ಎಣಿಕೆ ಕೇಂದ್ರಗಳ ಬಳಿ ಸ್ಥಾಪಿಸುವ ಮಾಧ್ಯಮ ಕೇಂದ್ರಗಳಲ್ಲಿ ಎಲ್ಲಾ ರೀತಿಯ ವ್ಯವಸ್ಥೆಯನ್ನು ಸರಿಯಾಗಿ ಮಾಡಿರಬೇಕು. ಮಾಧ್ಯಮ ಪ್ರತಿನಿಧಿಗಳಿಗೆ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಸೇರಿದಂತೆ ಇನ್ನಿತರೆ ಸೌಲಭ್ಯಗಳನ್ನು ಸರಿಯಾಗಿ ಕಲ್ಪಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಮತ ಎಣಿಕೆ ಸಿಬ್ಬಂದಿಗಳನ್ನು ನಿಯೋಜಿಸಿ ತರಬೇತಿಯನ್ನು ನೀಡಲಾಗಿದೆ. ಭದ್ರತೆಗಾಗಿ ಪೊಲೀಸ್ ಸಿಬ್ಬಂದಿಯನ್ನು ಕೂಡಾ ನಿಯೋಜಿಸಲಾಗಿದೆ. ಅಂಚೆ ಮತ ಪತ್ರ ಎಣಿಕೆಯನ್ನು ಸರಿಯಾಗಿ ಮಾಡಬೇಕೆಂದು ಸೂಚಿಸಿದರು.
ಪದವೀಧರರ ಕ್ಷೇತ್ರ ಕುರಿತು ಸಭೆ:
ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಮೇ 3 ರಂದು ಮತದಾನ ನಡೆಯಲಿದ್ದು, ಈ ಸಂಬಂಧ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಬೆಂಗಳೂರು ನಗರ ಜಿಲ್ಲೆಯ 3 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಮತ್ತು ಸ್ಟ್ರಾಂಗ್ ರೂಂ ಕೇಂದ್ರಗಳ ವಿವರ:
1. ಬೆಂಗಳೂರು ಕೇಂದ್ರ: ಮೌಂಟ್ ಕಾರ್ಮೆಲ್ ಕಾಲೇಜು, ಅರಮನೆ ರಸ್ತೆ, ವಸಂತನಗರ, ಬೆಂಗಳೂರು.
2. ಬೆಂಗಳೂರು ಉತ್ತರ: ಸೆಂಟ್ ಜೋಸೆಫ್ ಕಾಲೇಜು, ಮಲ್ಯ ರಸ್ತೆ, ಬೆಂಗಳೂರು.
3. ಬೆಂಗಳೂರು ದಕ್ಷಿಣ: ಎಸ್.ಎಸ್.ಎಂ.ಆರ್.ವಿ ಕಾಲೇಜು, 9ನೇ ಬ್ಲಾಕ್, ಜಯನಗರ, ಬೆಂಗಳೂರು.
ಈ ವೇಳೆ ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ಸೆಲ್ವಮಣಿ, ಅಪರ ಜಿಲ್ಲಾ ಚುನಾವಣಾಧಿಕಾರಿಗಳಾದ ವಿನೋತ್ ಪ್ರಿಯಾ, ಸ್ನೇಹಲ್, ದಯಾನಂದ್, ಚುನಾವಣಾ ವಿಭಾಗದ ಸಹಾಯಕ ಆಯುಕ್ತರಾದ ರವಿ ಚಂದ್ರ ನಾಯ್ಕ್ ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.