ಮನೆ ಉದ್ಯೋಗ ‘ಲಂಚ ತೆಗೆದುಕೊಳ್ಳಿ ಕೆಲಸ ಕೊಡಿ’: ಬೊಮ್ಮಾಯಿಯವರೇ  ಉದ್ಯೋಗಾಕಾಂಕ್ಷಿಗಳ ಗೋಳು ಕೇಳಿ ಎಂದ ಕಾಂಗ್ರೆಸ್

‘ಲಂಚ ತೆಗೆದುಕೊಳ್ಳಿ ಕೆಲಸ ಕೊಡಿ’: ಬೊಮ್ಮಾಯಿಯವರೇ  ಉದ್ಯೋಗಾಕಾಂಕ್ಷಿಗಳ ಗೋಳು ಕೇಳಿ ಎಂದ ಕಾಂಗ್ರೆಸ್

0

ಬೆಂಗಳೂರು(Bengaluru): ‘ಲಂಚ ತೆಗೆದುಕೊಳ್ಳಿ ಕೆಲಸ ಕೊಡಿ’ ಎಂದು ಪತ್ರ ಬರೆದು, ಘೋಷಣೆಗಳನ್ನು ಕೂಗುವ ಮೂಲಕ ಉದ್ಯೋಗಾಕಾಂಕ್ಷಿಗಳು ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ.

ರಾಜ್ಯದಲ್ಲಿ ಖಾಲಿಯಿರುವ ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ, ರಾಜ್ಯ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳ ಒಕ್ಕೂಟದ ನೇತೃತ್ವದಲ್ಲಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಯುತ್ತಿದೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್‌, #40PercentSarkara ಟ್ಯಾಗ್‌ ಬಳಸಿ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಪಿಎಸ್‌ಐ ನೇಮಕಾತಿ ಹಗರಣದಿಂದಾಗಿ ಸಾಕಷ್ಟು ಜನರ ಬದುಕು ಅತಂತ್ರವಾಗಿದೆ ಎಂದಿರುವ ಕಾಂಗ್ರೆಸ್‌, ‘ಉದ್ಯೋಗಾಕಾಂಕ್ಷಿಗಳ ಬಳಿ ಪುಸ್ತಕ, ಪೆನ್ನು, ಭವಿಷ್ಯದ ಕನಸು ಬಿಟ್ಟರೆ ಬೇರೇನೂ ಇಲ್ಲ. ಸರ್ಕಾರಕ್ಕೆ ಲಂಚದ ಆಸೆ, ಕಮಿಷನ್ ಲಾಲಸೆ ಬಿಟ್ಟರೆ ಬೇರೇನೂ ಇಲ್ಲ. 40 ಪರ್ಸೆಂಟ್ ಕಮಿಷನ್‌ ಸರ್ಕಾರ ನಡೆಸಿದ ಪಿಎಸ್‌ಐ ಅಕ್ರಮದಿಂದಾಗಿ ಪ್ರಾಮಾಣಿಕ ಅಭ್ಯರ್ಥಿಗಳ ವಯಸ್ಸು ಮೀರುತ್ತಿದೆ. ಬದುಕು ಛಿದ್ರವಾಗಿದೆ. ಇವರ ಅತಂತ್ರ ಬದುಕಿಗೆ ಪರಿಹಾರವೇನು ಬಸವರಾಜ ಬೊಮ್ಮಾಯಿಯವರೇ?’ ಎಂದು ಕೇಳಿದೆ.

’40 ಪರ್ಸೆಂಟ್ ಸರ್ಕಾರದಲ್ಲಿ ಲಂಚವೇ ಸತ್ಯ, ಲಂಚಕ್ಕೇ ಪ್ರಾಶಸ್ತ್ಯ, ಲಂಚವೇ ದೇವರು, ಲಂಚವೇ ಸರ್ವಸ್ವ, ಲಂಚವೇ ಸರ್ವವ್ಯಾಪಿ, ನಿದ್ದೆ, ಊಟ ಬಿಟ್ಟು, ಸರ್ಕಾರಿ ನೌಕರಿಗಾಗಿ ಭವಿಷ್ಯ ಪಣಕ್ಕಿಟ್ಟು ಓದಿ ಪರೀಕ್ಷೆ ಬರೆದು ಉದ್ಯೋಗಾಕಾಂಕ್ಷಿಗಳು ಕಾಯುತ್ತಾ ಇದ್ದಾರೆ. ಲಂಚ ಪಡೆದಾದರೂ ಕೆಲಸ ಕೊಡಿ ಎನ್ನುತ್ತಿದ್ದಾರೆ. ಬೊಮ್ಮಾಯಿ ಅವರೇ ಕೇಳಿಸಿಕೊಳ್ಳಿ’ ಎಂದು ಕಿಡಿಕಾರಿದೆ.

‘ಈ ಯುವಕರು ತಮ್ಮ ಕುಟುಂಬಸ್ಥರಿಗೆ ನೌಕರಿ ಪಡೆಯುವ ಭರವಸೆ ಕೊಟ್ಟು ಓದಿದ್ದಾರೆ. ಪೋಷಕರು ತಮ್ಮ ಮಗ ಉದ್ಯೋಗಸ್ಥನಾಗಿ ಮನೆಗೆ ಬೆಳಕಾಗುತ್ತಾನೆ ಎಂದು ಆಸೆ ಕಂಗಳಲ್ಲಿ ನೋಡುತ್ತಿದ್ದಾರೆ. ಭ್ರಷ್ಟ 40 ಪರ್ಸೆಂಟ್ ಸರ್ಕಾರದಿಂದ ಈ ಯುವಕರು ಮನೆಯಲ್ಲಿ ಮುಖ ತೋರಿಸಲಾಗದ ಸ್ಥಿತಿಯಲ್ಲಿದ್ದಾರೆ. ಬೊಮ್ಮಾಯಿ ಅವರೇ, ತಾವು ಇವರ ಗೋಳು ಕೇಳುವುದು ಯಾವಾಗ?’ ಎಂದು ಪ್ರಶ್ನೆ ಮಾಡಿದೆ.