ಚೆನ್ನೈ : ಕರೂರು ಕಾಲ್ತುಳಿತ ದುರಂತ ಸಂಭವಿಸಿದ ಮೂರು ದಿನಗಳ ಬಳಿಕ ನಟ, ಟಿವಿಕೆ ಮುಖ್ಯಸ್ಥ ವಿಜಯ್ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ದುರಂತದ ಹಿಂದಿನ ಸತ್ಯ ಶೀಘ್ರದಲ್ಲೇ ಬಹಿರಂಗಗೊಳ್ಳುತ್ತದೆ ಎಂದಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಮೂಲಕ ಸಂದೇಶವನ್ನು ಹಂಚಿಕೊಂಡಿರುವ ಅವರು, ನನ್ನ ಜೀವನದಲ್ಲೇ ಇಂತಹ ನೋವಿನ ದಿನಗಳನ್ನು ನಾನು ಅನುಭವಿಸಿಲ್ಲ. ನಿಜಕ್ಕೂ ಈ ಸಂಗತಿಯಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ, ಬರೀ ನೋವೇ ತುಂಬಿಕೊಂಡಂತಾಗಿದೆ. ಜನರು ನನ್ನ ಮೇಲಿನ ಪ್ರೀತಿಯಿಂದಾಗಿ ನನ್ನನ್ನು ನೋಡಲು ಬರುತ್ತಾರೆ.
ಅವರ ಪ್ರೀತಿ, ವಿಶ್ವಾಸಕ್ಕೆ ನಾನು ಯಾವಾಗಲೂ ಚಿರಋಣಿ. ಆದರೆ ಆ ಎಲ್ಲದಕ್ಕೂ ಮಿಗಿಲಾಗಿ ಜನರ ರಕ್ಷಣೆಯೇ ನನ್ನ ಮೊದಲ ಆದ್ಯತೆ. ನಾನು ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ಕೊಡುತ್ತೇನೆ. ಶೀಘ್ರದಲ್ಲಿಯೇ ಈ ಘಟನೆ ಹಿಂದಿನ ಸತ್ಯ ಬಹಿರಂಗವಾಗುತ್ತದೆ ಎಂದು ಪ್ರತಿಜ್ಞೆ ಮಾಡಿದ್ದಾರೆ.
ಈ ಘಟನೆಗೂ ಮುನ್ನ ನಾನು ರಾಜಕೀಯವನ್ನು ಬದಿಗಿಟ್ಟು ಜನರ ಸುರಕ್ಷತೆಗಾಗಿ ಸೂಕ್ತವಾದ ಸ್ಥಳವನ್ನು ಆರಿಸಿ, ಪೊಲೀಸ್ ಇಲಾಖೆಗೆ ಮನವಿ ಮಾಡಿಕೊಂಡಿದ್ದೆ. ಆದರೆ ಏನಾಗಬಾರದು ಎಂದುಕೊಂಡಿದ್ದೆ, ಅದೇ ನಡೆದು ಹೋಗಿದೆ. ನಾನು ಒಬ್ಬ ಮನುಷ್ಯ. ಘಟನೆಯಲ್ಲಿ ಇಷ್ಟೊಂದು ಜನರಿಗೆ ತೊಂದರೆಯಾದಾಗ ನಾನು ಅಲ್ಲಿಯೇ ಇರಬಹುದಿತ್ತು. ಆದರೆ ನಾನಿದ್ದರೆ ಸಮಸ್ಯೆ ಇನ್ನೂ ಹೆಚ್ಚಾಗಬಹುದು ಎಂದು ತಿಳಿದು ಅಲ್ಲಿಂದ ಹೊರಟು ಹೋದೆ ಎಂದಿದ್ದಾರೆ.
ಇದಕ್ಕೂ ಮುನ್ನ ನಾವು ಐದು ಜಿಲ್ಲೆಗಳಲ್ಲಿ ಪ್ರಚಾರ ಮಾಡಿದ್ದೇವೆ, ಆದರೆ ಕರೂರಿನಲ್ಲಿ ಯಾಕೆ ಹೀಗಾಯ್ತು? ಹೇಗಾಯ್ತು? ಜನರಿಗೆ ಎಲ್ಲ ಗೊತ್ತಿದೆ. ಅವರೆಲ್ಲವನ್ನೂ ನೋಡುತ್ತಿದ್ದಾರೆ. ಶೀಘ್ರವೇ ಎಲ್ಲ ಸತ್ಯ ಬಹಿರಂಗಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.
ಸೆ.27ರಂದು ತಮಿಳುನಾಡಿನ ಕರೂರಿನಲ್ಲಿ ನಟ, ರಾಜಕಾರಣಿ ವಿಜಯ್ ರ‍್ಯಾಲಿ ಹಮ್ಮಿಕೊಂಡಿದ್ದರು. ಅಂದು ಕರೂರಿಗೆ ಮಧ್ಯಾಹ್ನ ತಲುಪಬೇಕಿದ್ದ ವಿಜಯ್ ಏಳು ಗಂಟೆ ತಡವಾಗಿ ಆಗಮಿಸಿದ್ದರು. ಹೀಗಾಗಿ ಜನಸಂದಣಿ ಹೆಚ್ಚಾಗಿ, ಕಾಲ್ತುಳಿತ ಸಂಭವಿಸಿತ್ತು. ಪರಿಣಾಮ 41 ಜನರು ಸಾವನ್ನಪ್ಪಿದ್ದರು.
ಇದೇ ವೇಳೆ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಅವರಿಗೆ ಮನವಿ ಮಾಡಿಕೊಂಡಿದ್ದು, ನನ್ನ ವಿರುದ್ಧ ಬೇಕಾದ್ರೆ ಸೇಡು ತೀರಿಸಿಕೊಳ್ಳಿ. ಆದರೆ ನನ್ನ ಬೆಂಬಲಿಗರಿಗೆ ಏನು ಮಾಡಬೇಡಿ. ನಾನು ಮನೆಯಲ್ಲಿ ಅಥವಾ ಕಚೇರಿಯಲ್ಲಿ ಇರುತ್ತೇನೆ. ನೀವು ನನ್ನ ಮೇಲೆ ಯಾವ ರೀತಿ ಬೇಕಾದರೂ ಕ್ರಮ ಕೈಗೊಳ್ಳಬಹುದು ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.















