ಮನೆ ರಾಜ್ಯ ಮೈಸೂರು ಸ್ಯಾಂಡಲ್ ಸೋಪ್‌ಗೆ ತಮನ್ನಾ ಬೇಡ, ನಾನೇ ರಾಯಭಾರಿ: ವಾಟಾಳ್ ನಾಗರಾಜ್

ಮೈಸೂರು ಸ್ಯಾಂಡಲ್ ಸೋಪ್‌ಗೆ ತಮನ್ನಾ ಬೇಡ, ನಾನೇ ರಾಯಭಾರಿ: ವಾಟಾಳ್ ನಾಗರಾಜ್

0

ರಾಮನಗರ: “ಮೈಸೂರು ಸ್ಯಾಂಡಲ್ ಸೋಪ್‌ಗೆ ತಮಿಳು, ತೆಲುಗು ನಟಿಯರ ಅಗತ್ಯವಿಲ್ಲ. ನಾನು ಉಚಿತವಾಗಿ ರಾಯಭಾರಿ ಆಗುತ್ತೇನೆ” ಎಂದು ಹೇಳುವ ಮೂಲಕ ಖ್ಯಾತ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಮೈಸೂರು ಸ್ಯಾಂಡಲ್ ಸೋಪ್ ಕಂಪನಿಯ ತೀರ್ಮಾನವನ್ನು ಭಾರಿ ಟೀಕೆಗೆ ಒಳಪಡಿಸಿದ್ದಾರೆ.

ಮೈಸೂರು ಸ್ಯಾಂಡಲ್ ಸೋಪ್ ಕಂಪನಿ 6.20 ಕೋಟಿ ರೂಪಾಯಿ ನೀಡಿ ಚಿತ್ರನಟಿ ತಮನ್ನಾ ಭಾಟಿಯಾ ಅವರನ್ನು ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿರುವ ವಿಚಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ವಾಟಾಳ್ ನಾಗರಾಜ್, “ಶ್ರೀಗಂಧ ಮತ್ತು ಮೈಸೂರು – ಇವೆರಡೂ ಭಾರತೀಯ ಪರಂಪರೆಯ ಹೆಮ್ಮೆ. ಇಂತಹ ಆಸ್ತಿ ಕನ್ನಡಿಗರ ಗರ್ವ. ಈ ಬ್ರಾಂಡ್‌ಗೊಂದು ಕನ್ನಡದ ಮುಖವಾಣಿ ಬೇಕು. ತಮಿಳು, ತೆಲುಗಿನವರು ಇಲ್ಲೇನೂ ಬೇಡ” ಎಂದು ಒತ್ತಿಹೇಳಿದ್ದಾರೆ.

ರಾಮನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, “ರಾಜ್ಯ ಸರ್ಕಾರ ತಮನ್ನಾ ಅವರಿಗೆ ಕೋಟಿ ಕೋಟಿ ಹಣ ನೀಡಿ ಕನ್ನಡದ ಕಂಪನಿಗೆ ರಾಯಭಾರಿ ಮಾಡುವುದು ನಾಚಿಕೆಗೇಡಿನ ಸಂಗತಿ. ಸಿಎಂ, ಡಿಸಿಎಂ, ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಪ್ರತಿದಿನವೂ ಮೈಸೂರು ಸ್ಯಾಂಡಲ್ ಸೋಪ್ ಬಳಸಿ ಸ್ನಾನ ಮಾಡಿದರೆ, ಅದೇ ಸಕಾರಾತ್ಮಕ ಪ್ರಚಾರ ಆಗುತ್ತದೆ. ಅದಕ್ಕೋಸ್ಕರ ಕೋಟಿ ಹಣ ಖರ್ಚು ಮಾಡಬೇಕಾಗಿಲ್ಲ” ಎಂದು ಅಭಿಪ್ರಾಯಪಟ್ಟರು.

ತಮನ್ನಾಗೆ 6.20 ಕೋಟಿ ರೂ. ನೀಡಿರುವುದರ ವಿರುದ್ಧ ಸಿಡಿದೆದ್ದಿದ್ದಾರೆ. “ಸಿಕ್ಕ ಸಿಕ್ಕವರಿಗೆ ಕೋಟಿ ಕೋಟಿ ಕೊಟ್ಟು ಹೊಡೆಯೋದು ಕಾರ್ಖಾನೆಯ ನಾಶಕ್ಕೆ ದಾರಿ ಮಾಡುತ್ತದೆ. ನಾಳೆ ಈ ತೀರ್ಮಾನದಿಂದಾಗಿ ಕಂಪನಿ ಮುಚ್ಚುವ ಪರಿಸ್ಥಿತಿ ಬರಬಹುದು.

“ನಾನೇ ಉಚಿತವಾಗಿ ಮೈಸೂರು ಸ್ಯಾಂಡಲ್ ಸೋಪ್‌ನ ರಾಯಭಾರಿ ಆಗುತ್ತೇನೆ” ಎಂದು ಘೋಷಿಸಿದ ವಾಟಾಳ್, “ಕನ್ನಡಿಗರಿಗೆ ಪ್ರೀತಿ ಇದ್ದರೆ, ಎಲ್ಲರೂ ಈ ಸೋಪ್ ಬಳಸಿ, ತಮ್ಮ ಬೆಂಬಲ ತೋರಿಸಬೇಕು. ಆ ಮೂಲಕ ನಾವು ನಮ್ಮ ಬ್ರಾಂಡ್‌ನ್ನು ನಾವು ಉಳಿಸಬೇಕು. ಹೊರಗಿನವರು ಬಂದು ನಮ್ಮ ಪರಂಪರೆಯನ್ನೇ ಮಾರಾಟ ಮಾಡ್ತಿದ್ದಾರೆ. ಇವು ಕೇವಲ ವ್ಯವಹಾರಗಳು ಅಲ್ಲ, ಇದು ನಮ್ಮ ಅಸ್ತಿತ್ವದ ವಿಚಾರ” ಎಂದು ಹೇಳಿದ್ದಾರೆ.