ಚೆನ್ನೈ(Chennai): ನಟಿ ಹಾಗೂ ತಮಿಳುನಾಡು ಬಿಜೆಪಿ ಮಹಿಳಾ ಘಟಕದ ನಾಯಕಿ ಗಾಯತ್ರಿ ರಘುರಾಮ್ ಅವರು ಬಿಜೆಪಿಗೆ ಮಂಗಳವಾರ ರಾಜೀನಾಮೆ ನೀಡಿದ್ದು, ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಶಿಸ್ತಿನ ಪಕ್ಷವಾದ ಬಿಜೆಪಿಯಲ್ಲಿ ಮಹಿಳೆಯರಿಗೆ ಗೌರವ, ಸಮಾನ ಅವಕಾಶಗಳು ಸಿಗುತ್ತಿಲ್ಲ ಎಂದಿರುವ ಅವರು, ಭಾರವಾದ ಹೃದಯದಿಂದ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಅಣ್ಣಾಮಲೈ ಅವರ ನಾಯಕತ್ವದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲವಾಗಿದೆ. ಇದರಿಂದಾಗಿ ನಾನು ಪಕ್ಷ ತೊರೆಯುತ್ತಿದ್ದೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿರುವ ಮಾಜಿ ಪೊಲೀಸ್ ಅಧಿಕಾರಿ ಕೆ. ಅಣ್ಣಾಮಲೈ ವಿರುದ್ಧ ಗಾಯತ್ರಿ ರಘುರಾಮ್ ಗಂಭೀರ ಆರೋಪ ಮಾಡಿ, ಅಣ್ಣಾಮಲೈ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದಾರೆ, 6 ತಿಂಗಳು ಅಮಾನತು ಮಾಡಿ ಪಕ್ಷದಿಂದ ದೂರವಿರಿಸಿದರು ಎಂದಿದ್ದಾರೆ.
ನನ್ನ ಹೃದಯ ಮತ್ತು ಆತ್ಮಸಾಕ್ಷಿಯಲ್ಲಿ ನಾನು ಹಿಂದೂ ಧರ್ಮವನ್ನು ಬಲವಾಗಿ ನಂಬುತ್ತೇನೆ. ಅದನ್ನು ರಾಜಕೀಯ ಪಕ್ಷವೊಂದರಿಂದ ಪಡೆಯಬೇಕಿಲ್ಲ. ದೈವ ಮತ್ತು ಧರ್ಮಾಚರಣೆಗೆ ದೇವಸ್ಥಾನಕ್ಕೆ ಹೋಗುತ್ತೇನೆ. ದೇವರು ಎಲ್ಲೆಲ್ಲೂ ಇದ್ದಾನೆ. ನನ್ನೊಳಗೂ ಇದ್ದಾನೆ ಎಂದೆಲ್ಲಾ ಬರೆದು ಟ್ವೀಟ್ ಮಾಡಿದ್ದಾರೆ.
ಗಾಯತ್ರಿ ರಘುರಾಮನ್ ಅವರು ಪಕ್ಷದ ಶಿಸ್ತು ಉಲ್ಲಂಘನೆ, ಪಕ್ಷಕ್ಕೆ ಮುಜುಗರ ಉಂಟುಮಾಡುವುದು, ಪಕ್ಷದ ನಿಯಮಗಳನ್ನು ಮೀರುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದಿದ್ದರಿಂದ ಅವರನ್ನು ಪಕ್ಷದಿಂದ 6 ತಿಂಗಳವರೆಗೆ ಅಮಾನತ್ತು ಮಾಡಲಾಗಿತ್ತು.
ಗಾಯತ್ರಿ ರಘುರಾಮ್ ಅವರು ಮಹಿಳಾ ಘಟಕದ ಅಧ್ಯಕ್ಷೆ ಮಾತ್ರವಲ್ಲದೇ ಸಾಗರೋತ್ತರ ತಮಿಳು ಅಭಿವೃದ್ಧಿ ವಿಭಾಗದ ಅಧ್ಯಕ್ಷೆಯಾಗಿಯೂ ಕೆಲಸ ಮಾಡಿದ್ದರು.















