ತಮಿಳುನಾಡು: ಚೆನ್ನೈ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸೋಮವಾರ ದಿನವಿಡೀ ಮಳೆಯಾಗುವ ಮುನ್ಸೂಚನೆಯಿದೆ. ಬೆಳಗ್ಗೆಯಿಂದಲೇ ಮಳೆ ಭಾರೀ ಮಳೆ ಶುರುವಾಗಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
ಚೆನ್ನೈ, ತಿರುವಳ್ಳೂರು, ಕಾಂಚೀಪುರಂ, ಚೆಂಗಲ್ಪಟ್ಟು, ವೆಲ್ಲೂರು ಮತ್ತು ರಾಣಿಪೇಟ್ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದಾಗಿ ತಮಿಳುನಾಡು ಸರ್ಕಾರವು ಆರು ಜಿಲ್ಲೆಗಳಲ್ಲಿ ಶಾಲೆಗಳಿಗೆ ಸೋಮವಾರ ರಜೆ ಘೋಷಿಸಿದೆ.
ಭಾರತೀಯ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಚೆನ್ನೈ ಮಹಾನಗರದಲ್ಲಿ ಭಾನುವಾರ ಬೆಳಗ್ಗೆ 8.30ರಿಂದ ಸೋಮವಾರ ಬೆಳಗ್ಗೆ 5.30ರವರೆಗೆ 137.6 ಮಿ.ಮೀ ಮಳೆಯಾಗಿದೆ.
ಹವಾಮಾನ ವೈಪರೀತ್ಯದಿಂದಾಗಿ ದುಬೈ-ಚೆನ್ನೈ ವಿಮಾನ ಬೆಂಗಳೂರಿಗೆ ಮಾರ್ಗ ಬದಲಿಸಿದೆ. ಚೆನ್ನೈ ವಿಮಾನ ನಿಲ್ದಾಣದಿಂದ ವಿಮಾನಗಳು ವಿಳಂಬವಾಗಿವೆ.
ಚೆನ್ನೈನ ಕೆಲವು ಭಾಗದಲ್ಲಿ ಮಳೆಯಿಂದ ಅನಾಹುತಗಳು ಆಗಿದ್ದು, ಮನೆಗಳಿಗೆ ನೀರು ನುಗ್ಗಿದ ವರದಿಯಾಗಿದೆ.
ಆದರೆ, ಮುಂದಿನ ಮೂರು ದಿನಗಳ ಕಾಲ ತೆಲಂಗಾಣದ ಕೆಲವು ಭಾಗಗಳಲ್ಲಿ ಬಿಸಿಗಾಳಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಲ್ಲದೆ, ಕರಾವಳಿ ಆಂಧ್ರಪ್ರದೇಶ ಮತ್ತು ಯಾನಂ ಮುಂದಿನ ಎರಡು ದಿನಗಳ ಕಾಲ ಬಿಸಿಲಿನ ತಾಪಕ್ಕೆ ಸಾಕ್ಷಿಯಾಗಲಿದೆ.