ಮೈಸೂರು(Mysuru): ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಎಡ- ಬಲ ಬೇಡ. ಇತಿಹಾಸವನ್ನು ಇತಿಹಾಸವಾಗಿಯೇ ಬೋಧಿಸಿ ಎಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಲಹೆ ನೀಡಿದರು.
ಪಠ್ಯ ಪರಿಷ್ಕರಣೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ಮಕ್ಕಳಿಗೆ ಸರಿಯಾದ ಇತಿಹಾಸ ಹೇಳಿಕೊಡಬೇಕು. ಇತಿಹಾಸವನ್ನು ತಿದ್ದಬಾರದು. ಮಕ್ಕಳಿಗೆ ಪ್ರಸ್ತುತ ಕಾಲಕ್ಕೆ ಅನುಗುಣವಾಗಿ ಪಠ್ಯ ಅಳವಡಿಸಬೇಕು ಎಂದರು.
ಪಾರಂಪರಿಕ ಕಟ್ಟಡಗಳ ಉಳಿವಿಗೆ ಟೆಂಡರ್ ಪ್ರಕ್ರಿಯೆ ಬದಲಾಗಬೇಕು. ಈಗಿರುವ ಟೆಂಡರ್ ಪ್ರಕ್ರಿಯೆ ಪ್ರಕಾರ, ಕಟ್ಟಡವನ್ನು ನೆಲಸಮ ಮಾಡುವುದು ಮತ್ತು ಮರು ನಿರ್ಮಾಣ ಮಾಡುವುದು ಅಂತಾ ಅಷ್ಟೇ ಇದೆ. ಪಾರಂಪರಿಕ ಕಟ್ಟಡಗಳನ್ನು ಪುನಶ್ಚೇತನಗೊಳಿಸಲು ಅವಕಾಶ ಕಲ್ಪಿಸಬೇಕು ಎಂದರು.
ಪುನಶ್ವೇತನಕ್ಕೆ ಅನುಮತಿ ಸಿಗುತ್ತಿಲ್ಲ. ಅದು ಕೂಡ ಸರಿಯಾಗಬೇಕಿದೆ. ಆಯುರ್ವೇದಿಕ್ ಆಸ್ಪತ್ರೆ ಚೆನ್ನಾಗಿ ಪುನಶ್ಚೇತನವಾಗಿದೆ. ಕೇವಲ ಸ್ಮಾಕರವಾಗಿಲ್ಲ, ಜನರಿಗೆ ಬಳಕೆ ಆಗುತ್ತಿದೆ. ಪಾರಂಪರಿಕ ಕಟ್ಟಡಗಳನ್ನು ಉಳಿಸುವ ನಿಟ್ಟಿನಲ್ಲಿ ಈ ಕಟ್ಟಡ ಮಾದರಿ ಆಗಬೇಕು ಎಂದರು.