ಮುಂಬೈ : ಪಾಕಿಸ್ತಾನ ಬಹಿಷ್ಕಾರ ಹಾಕಿದ್ದರೂ ಭಾರತ ಐಸಿಸಿ ಟಿ20 ವಿಶ್ವಕಪ್ ಪಂದ್ಯವಾಡಲು ಶ್ರೀಲಂಕಾಗೆ ತೆರಳಲಿದೆ. ಪಾಕ್ ತಂಡ ಕೊಲಂಬೋಗೆ ಆಗಮಿಸಿದರೂ ಭಾರತದ ವಿರುದ್ಧ ಆಡದೇ ಇರಲು ನಿರ್ಧಾರ ತೆಗೆದುಕೊಂಡಿದೆ. ಪಾಕ್ ಸರ್ಕಾರದ ನಿರ್ಧಾರ ಇದಾಗಿದ್ದರೂ, ಇಲ್ಲಿಯವರಗೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಐಸಿಸಿಗೆ ಅಧಿಕೃತವಾಗಿ ಪಂದ್ಯ ಬಹಿಷ್ಕಾರ ಮಾಡುವ ಬಗ್ಗೆ ಯಾವುದೇ ಸಂವಹನ ಮಾಡಿಲ್ಲ.
ಪಾಕ್ ಪಂದ್ಯವಾಡದ ಕಾರಣ ಭಾರತವೂ ಕೊಲಂಬೋಗೆ ಪ್ರಯಣ ಮಾಡುತ್ತೋ? ಇಲ್ವೋ? ಎಂಬ ಪ್ರಶ್ನೆ ಎದ್ದಿತ್ತು. ಈ ಪ್ರಶ್ನೆಗೆ ಉತ್ತರ ಸಿಕ್ಕಿದ್ದು ಪಾಕ್ ಬಹಿಷ್ಕಾರ ಹಾಕಿದ್ದರೂ ಕೊಲಂಬೋಗೆ ಭಾರತ ಪ್ರಯಾಣ ಬೆಳೆಸಲಿದೆ ಎಂದು ವರದಿಯಾಗಿದೆ. ಫೆಬ್ರವರಿ 15 ರಂದು ಕೊಲಂಬೋದಲ್ಲಿರುವ ಪ್ರೇಮದಾಸ ಕ್ರೀಡಾಂಗಣದಲ್ಲಿ ಪಂದ್ಯ ನಿಗದಿಯಾಗಿದೆ. ಬಿಸಿಸಿಐ ಮೂಲದ ಪ್ರಕಾರ, ಭಾರತ ತಂಡವು ಐಸಿಸಿಯ ಶಿಷ್ಟಾಚಾರದ ಪ್ರಕಾರ ಶ್ರೀಲಂಕಾಕ್ಕೆ ಪ್ರವಾಸ ಕೈಗೊಳ್ಳಲು ಸಜ್ಜಾಗಿದೆ. ತಂಡವು ವೇಳಾಪಟ್ಟಿಯ ಪ್ರಕಾರ ಅಭ್ಯಾಸ ನಡೆಸಲಿದೆ. ಪತ್ರಿಕಾಗೋಷ್ಠಿಗಳನ್ನು ನಡೆಸಲಿದೆ ಮತ್ತು ಪಂದ್ಯದ ರೆಫರಿ ಪಂದ್ಯವನ್ನು ರದ್ದುಗೊಳಿಸುವವರೆಗೆ ಕಾಯಲಿದೆ ಎಂದು ವರದಿಯಾಗಿದೆ.
ಸುಳ್ಳುಗಳನ್ನೇ ಹೇಳುತ್ತಿರುವ ಪಾಕಿಸ್ತಾನವನ್ನು ನಂಬಲು ಸಾಧ್ಯವಿಲ್ಲ. ಏಷ್ಯಾ ಕಪ್ ಟ್ರೋಫಿ ಹಸ್ತಾಂತರ ವಿಚಾರದಲ್ಲಿ ಭಾರೀ ಹೈಡ್ರಾಮಾ ಮಾಡುತ್ತಿರುವ ಪಾಕ್ ಭಾರತದ ಪಂದ್ಯಕ್ಕೂ ಮೊದಲು ಹೈಡ್ರಾಮಾ ಸೃಷ್ಟಿಸುವ ಸಾಧ್ಯತೆಯಿದೆ. ಪಾಕ್ ಮಾತನ್ನು ಕೇಳಿ ಭಾರತ ಶ್ರೀಲಂಕಾಗೆ ಹೋಗದೇ ಇದ್ದರೆ ಪಂದ್ಯ ನಡೆಯುವ ಮೊದಲು ನಾವು ಆಡಲು ಸಿದ್ದರಿದ್ದೇವೆ. ಆದರೆ ಭಾರತ ಪಂದ್ಯವಾಡಲು ಬಂದಿಲ್ಲ ಎಂದು ಹೇಳಿ ಮತ್ತೊಂದು ಕ್ಯಾತೆ ತೆರೆಯುವ ಸಾಧ್ಯತೆ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ.
ಟೂರ್ನಿಯಲ್ಲಿ ಭಾಗವಹಿಸಬೇಕೇ? ಬೇಡವೇ? ಎಂದು ನಿರ್ಧಾರ ಮಾಡಲು 6-7 ದಿನಗಳನ್ನು ತೆಗೆದುಕೊಂಡು ನಾಟಕ ಮಾಡಿದ್ದ ಪಾಕ್ ಕೊನೆ ಕ್ಷಣದಲ್ಲಿ ಮತ್ತೊಂದು ಹೈಡ್ರಾಮಾ ಮಾಡಬಹುದು ಅನ್ನುವ ಕಾರಣಕ್ಕೆ ತಮ್ಮ ಕಡೆಯಿಂದ ಯಾವುದೇ ಸಮಸ್ಯೆಯಾಗದೇ ಇರಲು ಭಾರತ ಲಂಕಾಗೆ ಪ್ರವಾಸ ಮಾಡಲಿದೆ. ಒಂದು ವೇಳೆ ಭಾರತದ ವಿರುದ್ಧ ಪಂದ್ಯವಾಡದೇ ಇದ್ದರೆ ಐಸಿಸಿ ಪಾಕಿಸ್ತಾನಕ್ಕೆ ಭಾರೀ ದಂಡ ವಿಧಿಸುವ ಜೊತೆ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ. ಭಾರತದ ಈ ನಡೆಯಿಂದ ಪಾಕ್ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬ ಕುತೂಹಲ ಈಗ ಹೆಚ್ಚಾಗಿದೆ.















