ಪೆದ್ರೊ ಚಿತ್ರ ನಿರ್ಮಿಸಿದ್ದ ರಿಷಬ್ ಶೆಟ್ಟಿ ಅವರ ನಿರ್ಮಾಣ ಸಂಸ್ಥೆಯಿಂದಲೇ ಈ ಚಿತ್ರ ಕೂಡ ಪ್ರಾರಂಭವಾಗಿತ್ತು. ಆದರೆ ರಿಷಬ್ ಶೆಟ್ಟಿ ಕಾಂತಾರ ಚಿತ್ರದಲ್ಲಿ ಬ್ಯುಸಿಯಾಗಿರುವುದರಿಂದ ಇದೀಗ ಚಿತ್ರವನ್ನು ಅನುರಾಗ್ ಕಶ್ಯಪ್ ನಿರ್ಮಿಸಿದ್ದಾರೆ.
ನಟೇಶ್ ಹೆಗ್ಡೆ ಅಭಿನಯದ ವಾಘಚಿಪಾಣಿ (ಟೈಗರ್ಸ್ ಪಾಂಡ್) ಚಿತ್ರದ ಟೀಸರ್ ಅನ್ನು ಚಿತ್ರತಂಡ ಗುರುವಾರ ಅನಾವರಣಗೊಳಿಸಿದೆ. ಕ್ರೈಮ್ ಥ್ರಿಲ್ಲರ್ ಆಗಿರುವ ಈ ಚಿತ್ರವನ್ನು ರಂಜನ್ ಸಿಂಗ್ ಮತ್ತು ನಟೇಶ್ ಜೊತೆಗೆ ಬಾಲಿವುಡ್‌ನ ಅನುರಾಗ್ ಕಶ್ಯಪ್ ನಿರ್ಮಿಸಿದ್ದಾರೆ. ಫೆಬ್ರುವರಿ 15ರಂದು 75ನೇ ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಚಿತ್ರ ಪ್ರದರ್ಶನ ಕಾಣಲು ಸಿದ್ಧವಾಗಿದೆ.
ಚಿತ್ರತಂಡದ ಪ್ರಕಾರ, ಚಿತ್ರವು ಸಾಂಪ್ರದಾಯಿಕ, ಊಳಿಗಮಾನ್ಯ ಪರಂಪರೆಯಿಂದ ಬರುವ ಶ್ರೀಮಂತ, ನಿರ್ದಯ ವ್ಯಾಪಾರಿಯ ಸುತ್ತ ಸುತ್ತುತ್ತದೆ. ಆತನು ಸ್ವಂತ ಹಿತಾಸಕ್ತಿಗಳನ್ನು ಪೂರೈಸಿಕೊಳ್ಳಲು ಸ್ಥಳೀಯ ಚುನಾವಣೆಯ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಾನೆ. ಆದಾಗ್ಯೂ, ಅವನ ಯೋಜನೆಗೆ ಬುದ್ಧಿವಂತ ಹಳ್ಳಿಗರು ಸವಾಲೆಸೆಯುತ್ತಾರೆ. ಇದು ಇಬ್ಬರ ನಡುವಿನ ಯುದ್ಧಕ್ಕೆ ಕಾರಣವಾಗುತ್ತದೆ.
ಈ ಬಗ್ಗೆ ಮಾತನಾಡಿದ ಅನುರಾಗ್, ‘ನನಗೆ ಚಿತ್ರ ನಿರ್ಮಾಣ ಮಾಡುವ ಅವಕಾಶ ಸಿಕ್ಕಾಗ, ಕೂಡಲೇ ನಾನು ಒಪ್ಪಿಕೊಂಡೆ. ನಟೇಶ್ ಅವರ ಕಥಾ ನಿರೂಪಣೆಯು ಉತ್ತಮವಾಗಿದೆ. ಅದು ಈಗಿನ ಜಗತ್ತು ನಡೆಯುತ್ತಿರುವ ರೀತಿಗೆ ನಿಮ್ಮನ್ನು ಕೊಂಡೊಯ್ಯುತ್ತದೆ. ಚಿತ್ರವು ಬರ್ಲಿನ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣುತ್ತಿರುವುದಕ್ಕೆ ನಮಗೆ ತುಂಬಾ ಸಂತೋಷವಾಗಿದೆ ಮತ್ತು ನಂತರ ಅದು ಜಾಗತಿಕವಾಗಿ ಇಷ್ಟವಾಗುತ್ತದೆ ಎಂದು ಭಾವಿಸುತ್ತೇವೆ’ ಎಂದಿದ್ದಾರೆ.
ನಟೇಶ್ ಹೆಗ್ಡೆ ಮಾತನಾಡಿ, ವರದಿಯಂತೆ ಬರ್ಲಿನ್ ಚಲನಚಿತ್ರೋತ್ಸವಕ್ಕೆ ಆಯ್ಕೆಯಾದ ಮೊದಲ ಕನ್ನಡ ಚಿತ್ರ ಇದಾಗಿದೆ. ಚಿತ್ರವು ಒಂದು ಪ್ರತ್ಯೇಕ ಘಟಕವಾಗಿದೆ ಮತ್ತು ಅದರ ಪ್ರಯಾಣವನ್ನು ಪ್ರಾರಂಭಿಸಿದೆ ಎಂದು ನನಗೆ ಅನಿಸುತ್ತದೆ. ಅನುರಾಗ್ ಕಶ್ಯಪ್ ಅವರ ಪ್ರೀತಿಗಾಗಿ, ಈ ಸುದೀರ್ಘ ಪ್ರಯಾಣದಲ್ಲಿ ಬೆಂಬಲವಾಗಿ ನಿಂತಿದ್ದಕ್ಕಾಗಿ ಜೆರೆಮಿ ಚುವಾ ಮತ್ತು ರಂಜನ್ ಅವರಿಗೆ ನಾನು ಕೃತಜ್ಞನಾಗಿದ್ದೇನೆ. ರಿಷಬ್ ಶೆಟ್ಟಿ ಬೆಂಬಲವಿಲ್ಲದೇ ಈ ಚಿತ್ರ ಸೆಟ್ಟೇರಲು ಸಾಧ್ಯವಾಗುತ್ತಿರಲಿಲ್ಲ. ಅದ್ಬುತ ಅಭಿನಯ ನೀಡಿರುವ ನನ್ನ ಪಾತ್ರವರ್ಗವಾದ ದಿಲೀಶ್ ಪೋತನ್, ಅಚ್ಯುತ್ ಕುಮಾರ್, ಸುಮಿತ್ರಾ ಮತ್ತು ನನ್ನ ಅಪ್ಪ, ಗೋಪಾಲ್ ಹೆಗ್ಡೆ ಅವರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಜಗತ್ತು ಶೀಘ್ರದಲ್ಲೇ ಅವರೆಲ್ಲರನ್ನೇೂ ನೋಡುತ್ತದೆ ಎಂದು ನಾನು ಭಾವಿಸುತ್ತೇನೆ ಎಂದರು.
ಚಿತ್ರದಲ್ಲಿ ದಿಲೀಶ್ ಪೋತನ್, ಅಚ್ಯುತ್ ಕುಮಾರ್, ನಟೇಶ್, ಗೋಪಾಲ್ ಹೆಗ್ಡೆ, ಸುಮಿತ್ರಾ, ಬಿಂದು ರಕ್ಸಿದಿ, ಜಹಾಂಗೀರ್ ಎಂಎಸ್ ಮತ್ತು ನಾಗರಾಜ್ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ನಟೇಶ್ ಅವರು 2021ರಲ್ಲಿ ಪೆದ್ರೊ ಚಿತ್ರದಲ್ಲಿ ನಟಿಸಿದ್ದರು. ಆ ಚಿತ್ರವನ್ನು ನಿರ್ಮಿಸಿದ್ದ ರಿಷಬ್ ಶೆಟ್ಟಿ ಅವರ ನಿರ್ಮಾಣ ಸಂಸ್ಥೆಯಿಂದಲೇ ಈ ಚಿತ್ರ ಕೂಡ ಪ್ರಾರಂಭವಾಗಿತ್ತು. ಆದರೆ ರಿಷಬ್ ಶೆಟ್ಟಿ ಕಾಂತಾರ ಚಿತ್ರದಲ್ಲಿ ಬ್ಯುಸಿಯಾಗಿರುವುದರಿಂದ ಇದೀಗ ಚಿತ್ರವನ್ನು ಅನುರಾಗ್ ಕಶ್ಯಪ್ ನಿರ್ಮಿಸಿದ್ದಾರೆ.