ಮನೆ ಸುದ್ದಿ ಜಾಲ ವಿಸ್ತಾರಾ ವಿಮಾನದಲ್ಲಿ ತಾಂತ್ರಿಕ ತೊಂದರೆ: ದೆಹಲಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ

ವಿಸ್ತಾರಾ ವಿಮಾನದಲ್ಲಿ ತಾಂತ್ರಿಕ ತೊಂದರೆ: ದೆಹಲಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ

0

ನವದೆಹಲಿ: ಅಮೃತಸರಕ್ಕೆ ಪ್ರಯಾಣಿಸಬೇಕಿದ್ದ ವಿಸ್ತಾರಾ ವಿಮಾನದಲ್ಲಿ ತಾಂತ್ರಿಕ ತೊಂದರೆ ಎದುರಾಗುತ್ತಿದ್ದಂತೆ ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಿರುವ ಘಟನೆ  ಗುರುವಾರ ನಡೆದಿದೆ.

ತಾಂತ್ರಿಕ ತೊಂದರೆ ಎದುರಾಗುತ್ತಿದ್ದಂತೆ ವಿಮಾನದ ತುರ್ತು ಭೂಸ್ಪರ್ಶಕ್ಕೆ ನಿರ್ಧರಿಸಲಾಗಿದೆ. ‘ದೆಹಲಿ ಮತ್ತು ಅಮೃತಸರ ಮಾರ್ಗದಲ್ಲಿ ಹಾರಾಟ ನಡೆಸುವ ವಿಸ್ತಾರಾ ಯುಕೆ 697 ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿತು. ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನವನ್ನು ಪುನಃ ದೆಹಲಿ ವಿಮಾನ ನಿಲ್ದಾಣದಲ್ಲೇ ಇಳಿಸಲು ಪೈಲಟ್‌ಗಳು ನಿರ್ಧರಿಸಿದರು.’ ಎಂದು ವಿಸ್ತಾರಾದ ವಕ್ತಾರರು ತಿಳಿಸಿದ್ದಾರೆ.

ದೆಹಲಿಯಿಂದ ಹೊರಟ ವಿಮಾನದಲ್ಲಿ 146 ಪ್ರಯಾಣಿಕರಿದ್ದರು.’ಅಮೃತಸರಕ್ಕೆ ಪ್ರಯಾಣಿಕರನ್ನು ಕರೆದೊಯ್ಯಲು ಕೂಡಲೇ ಮತ್ತೊಂದು ವಿಮಾನದ ವ್ಯವಸ್ಥೆ ಮಾಡಲಾಯಿತು. ಆ ವಿಮಾನವು ಮಧ್ಯಾಹ್ನ 1:30ಕ್ಕೆ ಅಮೃತಸರಕ್ಕೆ ಹಾರಾಟ ನಡೆಸಿತು. ನಮ್ಮ ಗ್ರಾಹಕರು ಮತ್ತು ಸಿಬ್ಬಂದಿ ಸುರಕ್ಷತೆಗೆ ಮೊದಲ ಆದ್ಯತೆ ನೀಡುತ್ತೇವೆ’ ಎಂದು ವಿಸ್ತಾರಾ ವಕ್ತಾರರು ಹೇಳಿದ್ದಾರೆ.‌

ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಳ್ಳುತ್ತಿದ್ದಂತೆ ಪೈಲಟ್‌, ವಿಮಾನ ಪ್ರಾಧಿಕಾರವನ್ನು ಸಂಪರ್ಕಿಸಿದ್ದಾರೆ. ವಿಮಾನ ಇಳಿಯುವ ವೇಳೆಗೆ ಪೊಲೀಸರು, ಅಗ್ನಿ ಶಾಮಕ ದಳದ ಸಿಬ್ಬಂದಿ ಸಹ ಸ್ಥಳದಲ್ಲಿದ್ದರು. ವಿಮಾನದ ತುರ್ತು ಭೂಸ್ಪರ್ಶಕ್ಕೆ ಸಂಬಂಧಿಸಿದಂತೆ ಬೆಳಿಗ್ಗೆ 10:15ಕ್ಕೆ ಕರೆ ಬಂದಿತು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.