ಮುಂಬೈ(Mumbai): ಟಾಟಾ ಗ್ರೂಪ್ ನಡೆಸುತ್ತಿರುವ ಏರ್ ಇಂಡಿಯಾದ ಏರ್‌ಬಸ್ A320neo ವಿಮಾನವು ಟೇಕ್ ಆಫ್ ಆದ ಕೇವಲ 27 ನಿಮಿಷಗಳ ನಂತರ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಮುಂಬೈ ವಿಮಾನ ನಿಲ್ದಾಣಕ್ಕೆ ಮರಳಿದೆ.
ಬೆಂಗಳೂರು ಕಡೆಗೆ ತೆರಳುತ್ತಿದ್ದ ವಿಮಾನದ ಎಂಜಿನ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ವಿಮಾನ ಮತ್ತೆ ಮುಂಬೈಗೆ ತೆರಳಿ ತುರ್ತು ಭೂಸ್ಪರ್ಶ ಮಾಡಿದೆ. ನಂತರ ಬೇರೊಂದು ವಿಮಾನದ ಮೂಲಕ ಪ್ರಯಾಣಿಕರನ್ನು ಕಳುಹಿಸಿಕೊಡಲಾಯಿತು ಎಂದು ಮೂಲಗಳು ತಿಳಿಸಿವೆ.
ಇಂದು ಬೆಳಗ್ಗೆ 9:43ಕ್ಕೆ ವಿಮಾನವು ಮುಂಬೈನ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಇಂಜಿನ್ ಗಳಲ್ಲಿ ಹೆಚ್ಚಿನ ಗ್ಯಾಸ್ನಿಂದಾಗಿ ಉಂಟಾದ ತಾಪಮಾನದ ಬಗ್ಗೆ ಪೈಲಟ್ ಗಳಿಗೆ ಸಂದೇಶ ರವಾನೆಯಾಗಿದೆ.
ತದ ನಂತರ ಆ ಇಂಜಿನ್ ಸ್ಥಗಿತಗೊಳಿಸಿದ ಪೈಲಟ್ ಮುಂಬೈ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ 10:10ಕ್ಕೆ ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆತಂದಿದ್ದಾರೆ.
ಏರ್ ಇಂಡಿಯಾದ ಏರ್‌ಬಸ್ A320neo ವಿಮಾನಗಳು CFM ಇಂಟರ್‌ನ್ಯಾಶನಲ್‌ನ ಲೀಪ್ ಎಂಜಿನ್‌ಗಳನ್ನು ಹೊಂದಿವೆ. ಏವಿಯೇಷನ್ ರೆಗ್ಯುಲೇಟರ್ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ಈ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದೆ.