ಮನೆ Uncategorized ಭೂಗಳ್ಳರ ಜೊತೆ ಶಾಮೀಲಾದ ತಹಶೀಲ್ದಾರ್ :ಮೈಮೇಲೆ ಸಗಣಿ ಸುರಿದುಕೊಂಡು ಪ್ರತಿಭಟನೆ

ಭೂಗಳ್ಳರ ಜೊತೆ ಶಾಮೀಲಾದ ತಹಶೀಲ್ದಾರ್ :ಮೈಮೇಲೆ ಸಗಣಿ ಸುರಿದುಕೊಂಡು ಪ್ರತಿಭಟನೆ

0

ಮಂಡ್ಯ: ಬೂದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ಹಂಚಿಕೆ ಮಾಡಲು ಭೂಮಿ ಮಂಜೂರು ಮಾಡಲಾಗಿದ್ದರೂ ಸದರಿ ಭೂಮಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿರುವ ವ್ಯಾಜ್ಯವನ್ನು ತ್ವರಿತವಾಗಿ ಇತ್ಯರ್ಥಪಡಿಸದೆ ಭೂಗಳ್ಳರ ಜೊತೆ ತಹಶೀಲ್ದಾರ್ ಮತ್ತು ಕಂದಾಯ ಅಧಿಕಾರಿಗಳು ಶಾಮೀಲಾಗಿ ನಿವೇಶನ ಹಂಚಿಕೆ ಮಾಡದೆ ವಂಚಿಸುತ್ತಿದ್ದಾರೆ ಎಂದು ಆರೋಪಿಸಿ ಬೂದನೂರು ಸ್ವಂತ ಮನೆ ನಮ್ಮ ಹಕ್ಕು ಸಮಿತಿ ಕಾರ್ಯಕರ್ತರು ಮಂಡ್ಯದಲ್ಲಿ ಮೈಮೇಲೆ ಸಗಣಿ ಸುರಿದುಕೊಂಡು ಪ್ರತಿಭಟಿಸುವ ಮೂಲಕ ತಾಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


ತಾಲೂಕು ಕಚೇರಿ ಎದುರು ಸಮಿತಿಯ ಮಹಿಳಾ ಕಾರ್ಯಕರ್ತರು ಮೈ ಮೇಲೆ ಸಗಣಿ ಸುರಿದುಕೊಂಡು ಪ್ರತಿಭಟಿಸಿ ಅಧಿಕಾರಿಗಳ ವಿರುದ್ಧ ಕೆಂಡಮಂಡಲರಾಗಿ ಹಿಡಿ ಶಾಪ ಹಾಕಿದರು.
ಬೂದನೂರು ನಿವೇಶನರಹಿತರಿಗೆ ಮಂಜೂರಾದ ಭೂಮಿಗೆ‌ ಕೋಟ್೯ ವ್ಯಾಜ್ಯ ಬಗೆಹರಿಸುವ ಬದಲು ಭೂಗಳ್ಳರ ಜೊತೆ ತಹಶೀಲ್ದಾರ್ ಶಿವಕುಮಾರ್ ಬಿರಾದಾರ್ ಹಾಗೂ ಪ್ರಥಮ‌ ದರ್ಜೆ ಸಹಾಯಕ ತಿಪ್ಪೇಸ್ವಾಮಿ ಬಡ ಜನರನ್ನು ವಂಚನೆ ಮಾಡುತ್ತಿದ್ದಾರೆ, ನ್ಯಾಯಾಲಯದಲ್ಲಿರುವ ಭೂ ವ್ಯಾಜ್ಯವನ್ನು ಶೀಘ್ರ ಇತ್ಯರ್ಥಕ್ಕೆ ತುರ್ತು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ಶಾಸಕರು ಸೂಚನೆ ನೀಡಿದ್ದರು ಸಹ ವಕೀಲರಿಗೆ ಸಬೂಬೂ ಹೇಳುತ್ತಾ ಅವರನ್ನು ಸಾಗಾಹಾಕಿ ಭೂಗಳ್ಳರ ನೆರವಿಗೆ ನಿಂತಿದ್ದಾರೆ ಎಂದು ಆರೋಪಿಸಿದರು.
ನ್ಯಾಯಾಲಯದ ವ್ಯಾಜ್ಯಗಳ ಕುರಿತು ತಪ್ಪು ಮಾಹಿತಿ‌ ನೀಡಿರುವ ಭೂಗಳ್ಳರ ವಿರುದ್ದ ನ್ಯಾಯಾಲಯಕ್ಕೆ ಮನವರಿಕೆ ಮಾಡುವಂತೆ ಮನವಿ ಮಾಡಿದರೂ ಹಾಗೂ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಸುಳ್ಳು ದಾವೆ ಹೂಡಿರುವ ಬಗ್ಗೆ ನ್ಯಾಯಾಲಯಕ್ಕೆ ಹಾಜರಾಗಲು‌ ಮನವಿ ಮಾಡಿದರೂ‌ ಭೂಗಳ್ಳರ ಪ್ರಭಾವ, ಅಮಿಷಕ್ಕೆ‌ ಬಲಿಯಾಗಿದ್ದಾರೆ ಎಂದು ಕಿಡಿ ಕಾರಿದರು.
ದಲಿತ ಕುಟುಂಬಗಳಿಗೆ‌ ಭೂಮಿ ಸಿಗದಂತೆ ಸಂಚು ಮಾಡಿಕೊಂಡು ಹಕ್ಕುಪತ್ರ ಮಂಜೂರು ಮಾಡಿದರೂ ಭೂಮಿಗೆ ವಿವಿಧ ನ್ಯಾಯಾಲಯಗಳಲ್ಲಿ ದಾವೆ ಹೂಡಲು ತಹಶೀಲ್ದಾರ್ ಪರೋಕ್ಷ ಬೆಂಬಲ‌ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಬೂದನೂರು ಗ್ರಾಮ ವ್ಯಾಪ್ತಿಯಲ್ಲಿ ಸರ್ಕಾರಿ ‌ಭೂಮಿ ಲಪಟಾಯಿಸಲು ಕೆಲವರು ವೇದಮೂರ್ತಿ ಎಂಬ ನಕಲಿ ತಹಶೀಲ್ದಾರ್ ಹೆಸರಿನಲ್ಲಿ ದಾಖಲೆ ಸೃಷ್ಟಿಸಿ‌ ವಂಚಿಸುತ್ತಿದ್ದಾರೆ.ಅದಕ್ಕೆ ಅಧಿಕಾರಿಗಳು ಲಂಚ ಪಡೆದು ಬಡ ಜನತೆಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಪಂ‌ ಮಾಜಿ ಸದಸ್ಯ ಕುಳ್ಳ,ಬೂದನೂರು ಸತೀಶ್, ಸರೋಜಮ್ಮ, ವಿಜಯ,ಕನಕ, ಕರಿಯಪ್ಪ ಇತರರಿದ್ದರು.