ಪಾಟ್ನಾ : ಬಿಹಾರದಲ್ಲಿ ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್ ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲಾ “ಜೀವಿಕಾ ಸಿಎಂ ದೀದಿ”ಗಳಿಗೆ 30,000 ರೂ. ಮಾಸಿಕ ವೇತನದೊಂದಿಗೆ ಶಾಶ್ವತ ಸರ್ಕಾರಿ ಉದ್ಯೋಗವನ್ನು ನೀಡಲಾಗುವುದು ಎಂದು ಮಾಜಿ ಡಿಸಿಎಂ, ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಘೋಷಿಸಿದ್ದಾರೆ.
ಪಾಟ್ನಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆ ಎರಡನೇ ಚುನಾವಣಾ ಭರವಸೆಯನ್ನು ಘೋಷಿಸಿದರು. ಜೀವಿಕಾ ಸಿಎಂ ದೀದಿಗಳನ್ನು ಖಾಯಂ ಮಾಡಲಾಗುವುದು ಮತ್ತು ಅವರ ಸಂಬಳವನ್ನು ಹೆಚ್ಚಿಸುವುದರ ಜೊತೆಗೆ ಸರ್ಕಾರಿ ನೌಕರರ ಸ್ಥಾನಮಾನವನ್ನು ನೀಡಲಾಗುವುದು. ಇದಲ್ಲದೆ, ರಾಜ್ಯದ ಎಲ್ಲಾ ಗುತ್ತಿಗೆ ನೌಕರರನ್ನು ಶಾಶ್ವತ ಸರ್ಕಾರಿ ಉದ್ಯೋಗಿಗಳಾಗಿ ಪರಿಗಣಿಸಲಾಗುವುದು ಎಂದು ತಿಳಿಸಿದರು.
ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಈ ಸರ್ಕಾರದ ಅಡಿಯಲ್ಲಿ ಜೀವಿಕಾ ದೀದಿಗೆ ಅನ್ಯಾಯವಾಗಿದೆ. ನಾವು ಅವರ ಸಂಬಳವನ್ನು ತಿಂಗಳಿಗೆ 30,000 ರೂ.ಗಳಿಗೆ ಹೆಚ್ಚಿಸುವುದಾಗಿ ನಿರ್ಧರಿಸಿದ್ದೇವೆ. ಇದು ಸಾಮಾನ್ಯ ಘೋಷಣೆಯಲ್ಲ, ಇದು ಜೀವಿಕಾ ದೀದಿಯರ ಬೇಡಿಕೆಯಾಗಿದೆ ಎಂದು ಹೇಳಿದರು.
ಇದಲ್ಲದೇ ಜೀವಿಕಾ ದೀದಿ ಗುಂಪುಗಳಿಗೆ ಮಹಿಳೆಯರು ಪಡೆದ ಸಾಲಗಳ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲಾಗುತ್ತದೆ. ಜೊತೆಗೆ ಎರಡು ವರ್ಷಗಳವರೆಗೆ ಬಡ್ಡಿರಹಿತ ಸಾಲ ನೀಡಲಾಗುವುದು. ಜೀವಿಕಾ ಗುಂಪಿನ ಮಹಿಳೆಯರು ಸರ್ಕಾರಕ್ಕೆ ಸಂಬಂಧಿಸಿದ ಇತರ ಕೆಲಸಗಳನ್ನು ನಿರ್ವಹಿಸಲು ಮಾಸಿಕ 2,000 ರೂ. ಭತ್ಯೆ ನೀಡಲಾಗುವುದು. ಅದರೊಂದಿಗೆ ಸರ್ಕಾರವು 5,00,000 ರೂ.ಗಳವರೆಗಿನ ವಿಮಾ ರಕ್ಷಣೆಯನ್ನು ಒದಗಿಸುತ್ತದೆ ಎಂದು ತಿಳಿಸಿದರು.
ಮಗಳು ಮತ್ತು ತಾಯಿ ಯೋಜನೆಗಳ ಅಡಿಯಲ್ಲಿ, ಬಿಯಿಂದ ಇವರೆಗೆ ಪ್ರಯೋಜನಗಳನ್ನು ಒದಗಿಸಲಾಗುತ್ತದೆ. ಬಿ ಎಂದರೆ ಪ್ರಯೋಜನ, ಇ ಎಂದರೆ ಶಿಕ್ಷಣ, ಟಿ ಎಂದರೆ ತರಬೇತಿ ಮತ್ತು ಐ ಎಂದರೆ ಆದಾಯ. ಬಿಹಾರದ ಎಲ್ಲಾ ಗುತ್ತಿಗೆ ನೌಕರರನ್ನು ಖಾಯಂ ಸರ್ಕಾರಿ ನೌಕರರನ್ನಾಗಿ ಮಾಡಲಾಗುವುದು ಎಂದು ವಿವರಿಸಿದರು.
ಈ ಹಿಂದೆ ಅಧಿಕಾರಕ್ಕೆ ಬಂದ 20 ತಿಂಗಳೊಳಗೆ ರಾಜ್ಯದ ಪ್ರತಿ ಮನೆಗೆ ಒಂದು ಸರ್ಕಾರಿ ಉದ್ಯೋಗ ನೀಡುವುದಾಗಿ ತೇಜಸ್ವಿ ಭರವಸೆ ನೀಡಿದ್ದರು. ಸರ್ಕಾರ ರಚಿಸಿದ 20 ದಿನಗಳಲ್ಲಿ ಉದ್ಯೋಗ ಖಾತರಿಪಡಿಸುವ ಹೊಸ ಕಾನೂನನ್ನು ಪರಿಚಯಿಸಲಾಗುವುದು. ಅಧಿಕಾರ ವಹಿಸಿಕೊಂಡ 20 ತಿಂಗಳೊಳಗೆ ಈ ಯೋಜನೆಯನ್ನು ರಾಜ್ಯಾದ್ಯಂತ ಸಂಪೂರ್ಣವಾಗಿ ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದ್ದಾರೆ.














