ಮನೆ ಕಾನೂನು ರಾತ್ರಿ 11ರ ನಂತರ ಚಿತ್ರ ಮಂದಿರ, ಮಲ್ಟಿಪ್ಲೆಕ್ಸ್‌ಗಳಿಗೆ ಮಕ್ಕಳು ಪ್ರವೇಶಿಸದಂತೆ ತೆಲಂಗಾಣ ಹೈಕೋರ್ಟ್ ನಿಷೇಧ

ರಾತ್ರಿ 11ರ ನಂತರ ಚಿತ್ರ ಮಂದಿರ, ಮಲ್ಟಿಪ್ಲೆಕ್ಸ್‌ಗಳಿಗೆ ಮಕ್ಕಳು ಪ್ರವೇಶಿಸದಂತೆ ತೆಲಂಗಾಣ ಹೈಕೋರ್ಟ್ ನಿಷೇಧ

0

ಮುಂಜಾನೆ ಮತ್ತು ತಡರಾತ್ರಿ ಥಿಯೇಟರ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳಿಗೆ ಮಕ್ಕಳ ಪ್ರವೇಶಿಸದಂತೆ ನಿಷೇಧ ವಿಧಿಸಬೇಕು ಎಂದು ತೆಲಂಗಾಣ ಹೈಕೋರ್ಟ್ ಇತ್ತೀಚೆಗೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ

Join Our Whatsapp Group

ಈ ಮಧ್ಯೆ ಸರ್ಕಾರ ನಿರ್ಧಾರ ಕೈಗೊಳ್ಳುವವರೆಗೆ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ರಾತ್ರಿ 11 ಗಂಟೆಯ ನಂತರ ಚಿತ್ರ ಮಂದಿರ ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಚಲನಚಿತ್ರ ವೀಕ್ಷಿಸಲು ಅವಕಾಶ ನೀಡದಂತೆ ನ್ಯಾಯಮೂರ್ತಿ ಬಿ ವಿಜಯಸೇನ್ ರೆಡ್ಡಿ ಅವರು ಆದೇಶಿಸಿದರು.

ಪುಷ್ಪ-2 ಮತ್ತು ಗೇಮ್ ಚೇಂಜರ್ ಸಿನಿಮಾಗಳ ಟಿಕೆಟ್ ದರ ಏರಿಕೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ನಿರ್ದೇಶನ ನೀಡಿದೆ .

ಮಲ್ಟಿಪ್ಲೆಕ್ಸ್‌ಗಳಲ್ಲಿ ಕಾಲ್ತುಳಿತ ತಡೆಗಟ್ಟುವುದಕ್ಕಾಗಿ ಸುರಕ್ಷತಾ ಕ್ರಮಗಳನ್ನು ಕೋರಿದ್ದ ಅರ್ಜಿಯಲ್ಲಿ ರಾತ್ರಿ 1:30ರಿಂದ ಬೆಳಿಗ್ಗೆ 8:40ರವರೆಗೆ ಯಾವುದೇ ಚಲನಚಿತ್ರ ಪ್ರದರ್ಶನಕ್ಕೆ ಅನುಮತಿ ನೀಡದಂತೆ ಮನವಿ ಮಾಡಲಾಗಿತ್ತು.

ಹೈದರಾಬಾದ್‌ನ ಸಂಧ್ಯಾ ಚಿತ್ರ ಮಂದಿರದಲ್ಲಿ ಪುಷ್ಪ 2 ಸಿನಿಮಾದ ಮೊದಲ ಪ್ರದರ್ಶನದ ವೇಳೆ ಕಾಲ್ತುಳಿತ ಸಂಭವಿಸಿ ತಾಯಿ ಸಾವನ್ನಪ್ಪಿ ಮಗು ಗಂಭೀರ ಗಾಯಗೊಂಡ ಹಿನ್ನೆಲೆಯಲ್ಲಿ ಮಲ್ಟಿಪ್ಲೆಕ್ಸ್‌ಗಳಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಕೂಡ ಅರ್ಜಿ ಕೋರಿತ್ತು.

ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಿಂದ ಅಪವೇಳೆಯಲ್ಲಿ ಚಲನಚಿತ್ರ ವೀಕ್ಷಿಸಲು ಅನುಮತಿ ನೀಡಬಾರದು. ಮಲ್ಟಿಪ್ಲೆಕ್ಸ್‌ಗಳಲ್ಲಿ ರಾತ್ರಿ 1:30ರವರೆಗೂ ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತಿದ್ದು ಅಪ್ರಾಪ್ತ ವಯಸ್ಕರು ಥಿಯೇಟರ್‌ ಪ್ರವೇಶಿಸದಂತೆ ಯಾವುದೇ ನಿರ್ಬಂಧಗಳಿಲ್ಲ ಎಂದು ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ವಿಜಯ್ ಗೋಪಾಲ್ ಅವರು ಹೇಳಿದರು. ಫೆಬ್ರವರಿ 22 ರಂದು ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ನಡೆಸಲಿದೆ.