ತಿರುವನಂತಪುರ(ಕೇರಳ): ತೆಲಂಗಾಣದ ಎಸ್ಎಲ್ಬಿಸಿ ಟನಲ್ ಕುಸಿದ ಸ್ಥಳದಲ್ಲಿ ಕಳೆದ ಹಲವು ದಿನಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಸಂಕಷ್ಟದಲ್ಲಿ ಸಿಲುಗಿದ ಕಾರ್ಮಿಕರ ಪತ್ತೆಗೆ ಕೇರಳ ಪೊಲೀಸ್ ಇಲಾಖೆಯ ಕೆಡಾವರ್ ನಾಯಿಗಳನ್ನು ಬಳಸಲಾಗುತ್ತಿದೆ.
ಈ ಕೆಡಾವರ್ ನಾಯಿಗಳು ನಾಪತ್ತೆಯಾದ ಜನರು, ಮಾನವನ ಮೃತದೇಹ ಪತ್ತೆ ಮಾಡಲು ವಿಶೇಷ ತರಬೇತಿ ಪಡೆದಿವೆ ಎಂದು ಕೇರಳ ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮನವಿಯ ಮೇರೆಗೆ ಕೆಡಾವರ್ ಶ್ವಾನಗಳನ್ನು ರಕ್ಷಣಾ ಕಾರ್ಯಕ್ಕೆ ಕಳುಹಿಸಲಾಗಿದೆ. ರಾಷ್ಟ್ರೀಯ ವಿಪತ್ತು ಪ್ರಾಧಿಕಾರ ಕೂಡ ಈ ವಿಚಾರದಲ್ಲಿ ಸಹಾಯ ಕೇಳಿತ್ತು ಎಂದು ಹೇಳಿದೆ.
ಫೆ.22ರಂದು ಶ್ರೀಶೈಲಂ ಎಡ ದಂಡೆ ಕಾಲುವೆ ಸುರಂಗ ಕುಸಿಯಿತು. 8 ಕಾರ್ಮಿಕರು ಸುರಂಗದಲ್ಲಿ ಸಂಕಷ್ಟದಲ್ಲಿ ಸಿಲುಕಿದ್ದಾರೆ. ರಕ್ಷಣಾ ಕಾರ್ಯದಲ್ಲಿ ಎನ್ಡಿಆರ್ಎಫ್, ಭಾರತೀಯ ಸೇನೆ, ನೌಕಾ ದಳ ಹಾಗೂ ಇತರೆ ಸಂಸ್ಥೆಗಳು ಕೈಜೋಡಿಸಿವೆ.
ಎಸ್ಎಲ್ಬಿಸಿ ಟನಲ್ನ ಕೊನೆಯ 300 ಮೀಟರ್ನಲ್ಲಿ ಶೇಖರಣೆಯಾಗಿರುವ ಮಣ್ಣನ್ನು ಹೊರತೆಗೆಯಲು ವಾಟರ್ ಜೆಟ್ಗಳನ್ನು ಬಳಸಲಾಗಿದೆ. ಕಳೆದ 12 ದಿನಗಳಿಂದ ಟನಲ್ನಲ್ಲಿ ನಿರಂತರವಾಗಿ ರಕ್ಷಣಾ ಕಾರ್ಯ ನಡೆಯುತ್ತಿದೆ. ಆದರೆ, ಯಾವುದೇ ಸಕಾರಾತ್ಮಕ ಫಲಿತಾಂಶ ಕಂಡುಬಂದಿಲ್ಲ. ಇದೀಗ ರಕ್ಷಣಾ ಕಾರ್ಯದ ಭಾಗವಾಗಿ ವಾಟರ್ ಜೆಟ್ಗಳನ್ನು ಬಳಸಲಾಗುತ್ತಿದೆ. ಮಣ್ಣುಸಹಿತ ನೀರನ್ನು ಪಂಪ್ ಮಾಡಿ ಹೊರಹಾಕಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.














