ಬೆಂಗಳೂರು (Bengaluru): ಶ್ರೀ ಕೃಷ್ಣ ಜನ್ಮಾಷ್ಟಮಿಯ ಅದ್ಧೂರಿ ಸಂಭ್ರಮಾಚರಣೆಗೆ ಇಸ್ಕಾನ್ ದೇವಾಲಯ ಸೇರಿದಂತೆ ಹಲವು ದೇವಾಲಯಗಳು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಇಂದು (ಆಗಸ್ಟ್ 18), ಆ.19 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ ನಡೆಯಲಿದೆ. ಜನ್ಮಾಷ್ಟಮಿಗಾಗಿ ರಾಜಾಜಿನಗರದ ಇಸ್ಕಾನ್, ದೊಡ್ಡಕಲ್ಲಸಂದ್ರದ ಇಸ್ಕಾನ್ ದೇವಾಲಯ, ಬೆಂಗಳೂರು ದಕ್ಷಿಣದ ಆನಂದ ಗೋವಿಂದ ದೇವಸ್ಥಾನ ಸೇರಿದಂತೆ ಹಲವು ದೇವಾಲಯಗಳು ಸಜ್ಜಾಗಿವೆ.
ಪ್ರತಿ ವರ್ಷದಂತೆ ಈ ಬಾರಿಯೂ ರಾಜಾಜಿನಗರದ ಇಸ್ಕಾನ್ ದೇವಾಲಯವು ಭಕ್ತರಿಗೆ ಪ್ರಸಾದವಾಗಿ ವಿತರಿಸಲು ಒಂದು ಲಕ್ಷ ಲಡ್ಡುಗಳನ್ನು ಮತ್ತು 10 ಟನ್ ಸಕ್ಕರೆ ಪೊಂಗಲ್ ಗೆ ಸಿದ್ಧತೆ ಮಾಡಿಕೊಂಡಿದೆ. ಎರಡೂ ದಿನ ಬರುವ ಭಕ್ತರಿಗೆ ಯಾವುದೇ ತೊಂದರೆಗಳಾಗದಂತೆ ಸಕಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ.
ಈ ಬಾರಿ ಇಸ್ಕಾನ್ ದೇಗುಲದಲ್ಲಿ ಕೇರಳದ ಗುರುವಾಯೂರು ವಿನ್ಯಾಸದಲ್ಲಿ ಹೊರಾಂಗಣ ಮತ್ತು ಒಳಾಂಗಣ ಅಲಂಕಾರ ಮಾಡಲಾಗುತ್ತಿದೆ. ಅಲ್ಲಿನ ಸಾಂಪ್ರದಾಯಿಕ ತೆಂಗಿನ ಗರಿಗಳ ವಿಶೇಷ ವಿನ್ಯಾಸವೂ ಒಳಗೊಂಡಿದೆ ಎಂದು ಇಸ್ಕಾನ್ ಬೆಂಗಳೂರಿನ ಸಾರ್ವಜನಿಕ ಸಂಪರ್ಕಾಧಿಕಾರಿ ಕುಲಶೇಖರ ಚೈತನ್ಯ ದಾಸ ತಿಳಿಸಿದರು.
ರಾಜಾಜಿನಗರದ ಇಸ್ಕಾನ್ನಲ್ಲಿ ಆ.18 ಮತ್ತು 19ರಂದು ಬೆಳಿಗ್ಗೆ 4.30ಕ್ಕೆ ಮಂಗಳಾರತಿ, ತುಳಸಿ ಆರತಿ ನಡೆಯಲಿದೆ. 7.15ಕ್ಕೆ ದರ್ಶನ ಮತ್ತು ಆರತಿ, 8.45ಕ್ಕೆ ರಾಧಾ ಕೃಷ್ಣರ ಉಯ್ಯಾಲೆ ಸೇವೆ, 11ಕ್ಕೆ ರಾಧಾಕೃಷ್ಣ ಉತ್ಸವ ಮೂರ್ತಿಗೆ ಮೊದಲ ಅಭಿಷೇಕ, ಮಧ್ಯಾಹ್ನ 12ಕ್ಕೆ ರಾಜಭೋಗ್ ನೈವೇದ್ಯ, ಸಂಜೆ 5ಕ್ಕೆ ರಾಧಾಕೃಷ್ಣ ಉತ್ಸವ ಮೂರ್ತಿಗೆ ಎರಡನೇ ಅಭಿಷೇಕ. ರಾತ್ರಿ 8.30ಕ್ಕೆ ಮೂರನೇ ಅಭಿಷೇಕ ನಡೆದರೆ, 10.30ಕ್ಕೆ ಶಯನ ಪಲ್ಲಕ್ಕಿ ಉತ್ಸವದೊಂದಿಗೆ ಕಾರ್ಯಕ್ರಮ ಪೂರ್ಣಗೊಳ್ಳಲಿದೆ. ಜತೆಗೆ ರಾಧಾಕೃಷ್ಣರಿಗೆ ಪಂಚಗವ್ಯ, ಪಂಚಾಮೃತ, ಫಲೋದಕ, ಪುಷ್ಪೋದಕ, ಔಷಧಿ ಸ್ನಾನ, ಮಂತ್ರ ಪುಷ್ಪ ಸೇವಾ ಮತ್ತು ಅಷ್ಟಾವಧಾನ ಸೇವೆಗಳು ನಡೆಯಲಿವೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಆ.19ರಂದು ವೈಟ್ಫೀಲ್ಡ್ನ ಕೆಪಿಟಿಒ ಕನ್ವೆನ್ಷನ್ ಸೆಂಟರ್ ಆವರಣದಲ್ಲಿ ಇದೇ ಮೊದಲ ಬಾರಿಗೆ ಅದ್ಧೂರಿಯಾಗಿ ಗೋಕುಲಾಷ್ಟಮಿಯನ್ನು ನಡೆಸಲು ವೇದಿಕೆ ಸಜ್ಜುಗೊಳಿಸಲಾಗಿದೆ. ಬೃಹತ್ ವೇದಿಕೆಯಡಿ ಸುಮಾರು 50 ಸಾವಿರಕ್ಕೂ ಹೆಚ್ಚು ಭಕ್ತರು ಸೇರಲಿದ್ದಾರೆ. ರಾಜಾಜಿನಗರ ಇಸ್ಕಾನ್ ದೇವಾಲಯದಿಂದ ಶ್ರೀಕೃಷ್ಣ, ರುಕ್ಮಿಣಿ, ಸತ್ಯಭಾಮ ಉತ್ಸವ ಮೂರ್ತಿಗಳನ್ನು ಅಲ್ಲಿಗೆ ಮೆರವಣಿಗೆಯೊಂದಿಗೆ ಕರೆದೊಯ್ದು, ಅಭಿಷೇಕ, ಮಹಾಮಂಗಳಾರತಿಯೊಂದಿಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ಲಡ್ಡು-ಗೋಪಾಲ ಉಯ್ಯಾಲೆ ಸೇವೆ ಹಬ್ಬದ ವಿಶೇಷ ಆಕರ್ಷಣೆಯಾಗಿದೆ. ಇಡೀ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮಕ್ಕಳಿಗೆ ವೇಷಭೂಷಣ, ಭಗವದ್ಗೀತಾ ಶ್ಲೋಕ ಸೇರಿದಂತೆ ನಾನಾ ಸ್ಪರ್ಧೆಗಳನ್ನು ನಡೆಸಲಾಗುವುದು.
ಮನೆಗಳಲ್ಲೂ ಗೋಕುಲಾಷ್ಟಮಿಯನ್ನು ಅದ್ಧೂರಿಯಾಗಿ ಆಚರಿಸಲಿದ್ದಾರೆ. ಕೃಷ್ಣನನ್ನು ಪ್ರತಿಷ್ಠಾಪಿಸಿ, ಅವನಿಗೆ ಪ್ರಿಯವಾದ ತಿನಿಸುಗಳನ್ನು ನೈವೇದ್ಯ ರೂಪದಲ್ಲಿ ಪೂಜೆಗಿಟ್ಟು, ಕೃಷ್ಣನ ಹೆಜ್ಜೆಗಳನ್ನು ಬರೆದು ಆತನನ್ನು ಬರಮಾಡಿಕೊಳ್ಳುವುದೇ ಹಬ್ಬದ ವಿಶೇಷ.