ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
ಚೆಕ್ ಬೌನ್ಸ್ ಪ್ರಕರಣದಲ್ಲಿ ದಂಡ ಪಾವತಿಸದಿದ್ದರೆ ಆರು ತಿಂಗಳು ಜೈಲು ಶಿಕ್ಷೆಯ ಆದೇಶ ಪ್ರಶ್ನಿಸಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 56ನೇ ಸಿಟಿ ಸಿವಿಲ್ ಕೋರ್ಟ್, ದಂಡದಲ್ಲಿ ಶೇ.20ರಷ್ಟು ಮೊತ್ತವನ್ನು ಠೇವಣಿಯಿಡುವ ಷರತ್ತಿನೊಂದಿಗೆ ಜೈಲು ಶಿಕ್ಷೆ ಅಮಾನತುಗೊಳಿಸಿದೆ. ಜತೆಗೆ, 50 ಸಾವಿರ ರೂ. ಬಾಂಡ್ ಮತ್ತು ಒಬ್ಬರ ಶ್ಯೂರಿಟಿ ಒದಗಿಸಬೇಕು ಎಂದು ಷರತ್ತು ವಿಧಿಸಿದೆ. ಒಂದು ತಿಂಗಳೊಳಗೆ ಈ ಷರತ್ತು ಪಾಲಿಸದಿದ್ದರೆ ಮಧ್ಯಂತರ ರಿಲೀಫ್ ರದ್ದಾಗುತ್ತದೆ ಎಂದು ನ್ಯಾಯಾಲಯ ಆದೇಶಿಸಿದೆ.
ಚೆಕ್ ಬೌನ್ಸ್ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸಚಿವ ಮಧು ಬಂಗಾರಪ್ಪ ಅವರಿಗೆ ಶಿಕ್ಷೆ ವಿಧಿಸಿತ್ತು. ಸಚಿವರ ವಿರುದ್ಧ ದಾವೆ ಹೂಡಿದ್ದ ರಾಜೇಶ್ ಎಕ್ಸ್ಪೋರ್ಟ್ ಕಂಪನಿಗೆ 6.96 ಕೋಟಿ ರೂ. ದಂಡ ಪಾವತಿಸಬೇಕು. ಒಂದು ವೇಳೆ ದಂಡ ಪಾವತಿಸಲು ವಿಫಲರಾದರೆ ಮಧು ಬಂಗಾರಪ್ಪ ಅವರು 6 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕು ಎಂದು ಕೋರ್ಟ್ ಆದೇಶಿಸಿತ್ತು.