ಮನೆ ರಾಜಕೀಯ ಟೆಂಡರ್ ಹಣ ದುಪ್ಪಟ್ಟು: ಸಿವಿಲ್, ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತೇವೆ- ವಿಪಕ್ಷ ನಾಯಕ ಸಿದ್ದರಾಮಯ್ಯ

ಟೆಂಡರ್ ಹಣ ದುಪ್ಪಟ್ಟು: ಸಿವಿಲ್, ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತೇವೆ- ವಿಪಕ್ಷ ನಾಯಕ ಸಿದ್ದರಾಮಯ್ಯ

0

ಬೆಂಗಳೂರು: ರಾಜ್ಯ ಸರ್ಕಾರ ರಾಜ್ಯದ ಬೊಕ್ಕಸವನ್ನು ಲೂಟಿ ಮಾಡುತ್ತಿದೆ. ಟೆಂಡರ್‌ ಹಣವನ್ನು ಕೂಡ ಎರಡು, ಮೂರು ಪಟ್ಟು ಹೆಚ್ಚಿಗೆ ಮಾಡಿಕೊಂಡಿದ್ದಾರೆ. ನ್ಯಾಯಾಲಯದಲ್ಲಿ ಇವರ ವಿರುದ್ಧ ನಾವು ಸಿವಿಲ್‌ ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತೇವೆ ಎಂದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್‌ ಅವರ ನಿವಾಸದಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಮಂತ್ರಿ ಪಟ್ಟ ಸಿಗದ ಶಾಸಕರಿಗೆ ದುಡ್ಡು ಮಾಡಿಕೊಡಲು ತರಾತುರಿಯಲ್ಲಿ ಸಭೆ ಕರೆದು ಹಲವು ಯೋಜನೆಗಳಿಗೆ ಅನುಮೋದನೆ ಪಡೆಯುತ್ತಿದ್ದಾರೆ  ಎಂದು ಆರೋಪಿಸಿದರು.

ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು ಚುನಾವಣೆಗೆ ದುಡ್ಡು ಮಾಡಿಕೊಳ್ಳುವ ಉದ್ದೇಶದಿಂದ ತರಾತುರಿನಲ್ಲಿ ಕೆಬಿಜೆಎಲ್‌, ವಿಶ್ವೇರಯ್ಯ ನೀರಾವರಿ ನಿಗಮ, ಕರ್ನಾಟಕ ನೀರಾವರಿ ನಿಗಮದಲ್ಲಿ ಸಭೆಯನ್ನು ಕರೆದು ಯೋಜನೆಗಳಿಗೆ ಅನುಮೋದನೆ ಪಡೆಯುತ್ತಿದ್ದಾರೆ, ಇದರಲ್ಲಿ ಪಾರದರ್ಶಕತೆ ಇಲ್ಲ.

ರಾಜ್ಯದಲ್ಲಿ ಜನಜನಿತವಾಗಿರುವ 40% ಕಮಿಷನ್‌ ನ ಮುಂದುವರೆದ ಭಾಗವಿದು. ಟೆಂಡರ್‌ ಹಣವನ್ನು ಹೆಚ್ಚು ಮಾಡಿದ್ದಾರೆ, ಯಾರು ಹೆಚ್ಚು ಕಮಿಷನ್‌ ನೀಡುತ್ತಾರೆ ಅವರಿಗೆ ಕಾಮಗಾರಿ ಕೊಡುತ್ತಿದ್ದಾರೆ, ತಮಗೆ ಬೇಕಾದ ಗುತ್ತಿಗೆದಾರರನ್ನು ಹುಡುಕಿ ಕೆಲಸ ನೀಡುತ್ತಿದ್ದಾರೆ. ಹೀಗೆ ಮಾಡಿ ಕಮಿಷನ್‌ ವಸೂಲಿ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಲೋಕೋಪಯೋಗಿ, ನೀರಾವರಿ, ಬಿಬಿಎಂಪಿ, ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸುಮಾರು 20,000 ಕೋಟಿ ರೂ. ಬಾಕಿ ಬಿಲ್‌ ಇದೆ. 10% ಕಮಿಷನ್‌ ಕೊಟ್ಟವರಿಗೆ ಕೆಲಸ ಮಾರಾಟ ಮಾಡಲಾಗುತ್ತಿದೆ. ಇದು ಮುಖ್ಯಮಂತ್ರಿ ಕಚೇರಿಯಿಂದಲೇ ಆರಂಭವಾದುದ್ದು. ಇದನ್ನು ತಡೆಗಟ್ಟಬೇಕಾದುದ್ದು ಅಗತ್ಯ. ಇದನ್ನು ಸದನದಲ್ಲಿ ಕೂಡ ಪ್ರಸ್ತಾಪ ಮಾಡುತ್ತೇವೆ ಎಂದರು.

ಮತ್ತೆ ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ, ನಾವು ತನಿಖಾ ಆಯೋಗ ರಚನೆ ಮಾಡಿ ಎಲ್ಲವನ್ನೂ ತನಿಖೆ ಮಾಡಿಸಿ, ಯಾರ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ ಅವೆಲ್ಲವನ್ನೂ ಬಯಲಿಗೆಳೆಯುತ್ತೇವೆ ಎಂದು ಸರ್ಕಾರಕ್ಕೆ ಹಾಗೂ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.

ಜಂಟಿ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ಇದ್ದರು.

ಹಿಂದಿನ ಲೇಖನತಮಿಳುನಾಡು, ಕೇರಳ ಮತ್ತು ಕರ್ನಾಟಕದ 40 ಪ್ರದೇಶಗಳ ಮೇಲೆ ಎನ್’ಐಎ ದಾಳಿ
ಮುಂದಿನ ಲೇಖನತಾ.ಪಂ, ಜಿ.ಪಂ ಚುನಾವಣೆ: 10 ದಿನಗಳಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಅಧಿಸೂಚನೆ ಪ್ರಕಟಿಸಲು ಸರ್ಕಾರಕ್ಕೆ ಗಡುವು