ಕಲಬುರಗಿ: ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಬೆಂಗಳೂರು ಕ್ರಾಸ್ನಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ದುರ್ಮರಣ ಹೊಂದಿದ್ದಾರೆ.
ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ಡಿಕ್ಕಿಯಾಗಿ ಕಿಣ್ಣಿ ಸಡಕ್ ಗ್ರಾಮದ ಮೂವರು ಬೈಕ್ ಸವಾರರು ಮೃತಪಟ್ಟಿದ್ದಾರೆ.
ಯುವಕರು ಕಿಣ್ಣಿ ಸಡಕ್ ಗ್ರಾಮದಿಂದ ಕಲಬುರಗಿಗೆ ಬೈಕ್ನಲ್ಲಿ ತೆರಳುತ್ತಿದ್ದರು. ಇದೇ ವೇಳೆ ಕಲಬುರಗಿಯಿಂದ ಹುಮನಾಬಾದ್ ಕಡೆಗೆ ಸಾರಿಗೆ ಬಸ್ ತೆರಳುತ್ತಿತ್ತು. ಸ್ಥಳಕ್ಕೆ ಕಮಲಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದರೊಂದಿಗೆ, ರಾಜ್ಯದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಮತ್ತಷ್ಟು ಹೆಚ್ಚಾದಂತಾಗಿದೆ. ಭಾನುವಾರ ಬೆಳಗ್ಗೆ ಕೊನೆಗೊಂಡಂತೆ 24 ಗಂಟೆ ಅವಧಿಯಲ್ಲಿ ರಾಜ್ಯದಲ್ಲಿ ಸಂಭವಿಸಿದ ರಸ್ತೆ ಅಪಘತಗಳಲ್ಲಿ 51 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸಂಚಾರ ಹಾಗೂ ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಭಾನುವಾರ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿ ಕಳವಳ ವ್ಯಕ್ತಪಡಿಸಿದ್ದರು.
ಭಾನುವಾರ ಹಾಸನದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 6 ಜನ ಮೃತಪಟ್ಟಿದ್ದರು. 2023ರಲ್ಲಿ ಕರ್ನಾಟಕದಾದ್ಯಂತ ಪ್ರತಿದಿನ ಸರಾಸರಿ 34 ಜನರು ರಸ್ತೆ ಅಪಘಾತಗಳಲ್ಲಿ ಮೃತಪಟ್ಟಿದ್ದ ಬಗ್ಗೆ ಇತ್ತೀಚೆಗೆ ವರದಿಯಾಗಿತ್ತು. ಅದರಲ್ಲೂ ವಾರಾಂತ್ಯದಲ್ಲಿ ಹೆಚ್ಚಿನ ಅಪಘಾತಗಳು ವರದಿಯಾಗಿದ್ದವು. ಅಜಾಗರೂಕತೆಯ ಚಾಲನೆ, ಮದ್ಯಪಾನ ಮಾಡಿ ವಾಹನ ಚಲಾಯಿಸುವುದು ಹಾಗೂ ಸಂಚಾರ ನಿಯಮಗಳ ಉಲ್ಲಂಘನೆ ಹೆಚ್ಚುತ್ತಿರುವ ಬಗ್ಗೆ ಸಂಚಾರ ಪೊಲೀಸರು ಕಳವಳ ವ್ಯಕ್ತಪಡಿಸಿದ್ದಾರೆ.