ನವದೆಹಲಿ: ಬೆಂಗಳೂರಿನಲ್ಲಿ ಭಯೋತ್ಪಾದಕ ಚಟುವಟಿಕೆಗೆ ಕುಮ್ಮಕ್ಕು ನೀಡಿದ್ದ ಲಷ್ಕರ್ ಇ ತೊಯ್ಬಾ ಸಂಘಟನೆಯ ಉಗ್ರ ಸಲ್ಮಾನ್ ರೆಹಮಾನ್ ಖಾನ್ ನನ್ನು ರುವಾಂಡದಿಂದ ಭಾರತಕ್ಕೆ ಗಡಿಪಾರು ಮಾಡಿಸುವಲ್ಲಿ ಸಿಬಿಐ, ಎನ್ ಐಎ ಮತ್ತು ಇಂಟರ್ ಪೋಲ್ ಯಶಸ್ವಿಯಾಗಿರುವುದಾಗಿ ವರದಿ ತಿಳಿಸಿದೆ.
ಸಲ್ಮಾನ್ ರೆಹಮಾನ್ ಖಾನ್ ನಿಷೇಧಿತ ಭಯೋತ್ಪಾದಕ ಸಂಘಟನೆಯ ಸದಸ್ಯ ಎಂದು ಗುರುತಿಸಲಾಗಿದೆ. ಈತ ಉದ್ಯಾನ ನಗರಿ ಬೆಂಗಳೂರಿನಲ್ಲಿ ಭಯೋತ್ಪಾದಕ ಚಟುವಟಿಕೆಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಶಸ್ತ್ರಾಸ್ತ್ರ, ಸ್ಫೋಟಕಗಳು ಹಾಗೂ ಮದ್ದುಗುಂಡುಗಳನ್ನು ಸರಬರಾಜು ಮಾಡಿರುವುದಾಗಿ ವರದಿ ತಿಳಿಸಿದೆ.
ಬೆಂಗಳೂರು ಜೈಲಿನ ಭಯೋತ್ಪಾದನೆ ಸಂಚಿನ ಪ್ರಕರಣದಲ್ಲಿ ಸಲ್ಮಾನ್ ಶಾಮೀಲಾಗಿದ್ದು, ಎನ್ ಐಎ, ಇಂಟರ್ ಪೋಲ್ ತನಿಖೆ ವೇಳೆ, ಬೆಂಗಳೂರಿನಲ್ಲಿ ಉ*ಗ್ರ ಚಟುವಟಿಕೆ ನಡೆಸಲು ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಿರುವ ಮಾಹಿತಿ ಬಯಲಿಗೆ ಬಂದಿತ್ತು.
ರುವಾಂಡ ಇನ್ವೆಸ್ಟಿಗೇಷನ್ ಬ್ಯುರೋ ದ ಸಹಕಾರದೊಂದಿಗೆ ಇಂಟರ್ ಪೋಲ್ ಮತ್ತು ನ್ಯಾಷನಲ್ ಸೆಂಟ್ರಲ್ ಬ್ಯುರೋ ಸಲ್ಮಾನ್ ರೆಹಮಾನ್ ಖಾನ್ ನನ್ನು ರುವಾಂಡ ರಾಜಧಾನಿ ಕಿಗಾಲಿಯಲ್ಲಿ ಬುಧವಾರ (ನ.27) ಬಂಧಿಸಿತ್ತು.
ಉಗ್ರ ಸಲ್ಮಾನ್ ರೆಹಮಾನ್ ಖಾನ್ ನನ್ನು ಗುರುವಾರ ಬೆಳಗ್ಗೆಯೇ ರುವಾಂಡದಿಂದ ಭಾರತಕ್ಕೆ ಗಡಿಪಾರು ಮಾಡಲಾಗಿದ್ದು, ಎನ್ ಐಎ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದಿರುವುದಾಗಿ ಮೂಲಗಳು ತಿಳಿಸಿವೆ.
2020ರಿಂದ ಈವರೆಗೆ ಎನ್ ಐಎ ಭಯೋತ್ಪಾದಕ ಘಟನೆಗೆ ಸಂಬಂಧಿಸಿದ ಆರೋಪಿಗಳನ್ನು ಗಡಿಪಾರು ಮಾಡುವಲ್ಲಿ ಯಶಸ್ವಿಯಾಗಿದ್ದು, ಇದು 17ನೇ ಪ್ರಕರಣವಾಗಿದೆ ಎಂದು ವರದಿ ವಿವರಿಸಿದೆ.
ಬೆಂಗಳೂರಿನಲ್ಲಿ ಭಯೋತ್ಪಾದನೆ ಸಂಚು ರೂಪಿಸಿದ ಆರೋಪದ ಮೇಲೆ ಹೆಬ್ಬಾಳ ಪೊಲೀಸರು ಸಲ್ಮಾನ್ ವಿರುದ್ಧ ಎಫ್ ಐಆರ್ ದಾಖಲಿಸಿದ್ದರು. ಎನ್ ಐಎ ಮನವಿಯಂತೆ ಸಿಬಿಐ, ಉಗ್ರ ಖಾನ್ ವಿರುದ್ಧ ಇಂಟರ್ ಪೋಲ್ ರೆಡ್ ನೋಟಿಸ್ ಜಾರಿಗೊಳಿಸುವಲ್ಲಿ ಸಫಲವಾಗಿತ್ತು.
ತನಿಖೆಯ ಜಾಡು ಹಿಡಿದು ಹೊರಟಿದ್ದ ಎನ್ ಐಎ, ಇಂಟರ್ ಪೋಲ್, ಸಿಬಿಐಗೆ ಸಲ್ಮಾನ್ ರುವಾಂಡದಲ್ಲಿ ಇದ್ದಿರುವುದನ್ನು ಪತ್ತೆ ಮಾಡಿತ್ತು. ಕೊನೆಗೂ ಗುರುವಾರ (ನ.28) ಎನ್ ಐಎ ಭದ್ರತಾ ಪಡೆ ಭಾರತಕ್ಕೆ ಕರೆ ತಂದಿದೆ.
ಇಂಟರ್ ಪೋಲ್ ನೆರವಿನಿಂದ 2024ರಲ್ಲಿ ತಲೆಮರೆಸಿಕೊಂಡಿದ್ದ 26 ಆರೋಪಿಗಳನ್ನು ಭಾರತಕ್ಕೆ ಕರೆತರಲಾಗಿದೆ. ಕೋರ್ಟ್ ಗೆ ಕರೆದೊಯ್ಯುವ ವೇಳೆ ತಪ್ಪಿಸಿಕೊಂಡು ಪರಾರಿಯಾಗಿದ್ದ ಉಗ್ರ ಸಲ್ಮಾನ್ ನನ್ನು ಮತ್ತೆ ಬಂಧಿಸಿ ಕರೆ ತಂದಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ವರದಿ ತಿಳಿಸಿದೆ.














